ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ಹೂಸ್ಟನ್(ಅಮೆರಿಕ):
ಅಮೆರಿಕಾದ ಹೂಸ್ಟನ್ ನ ಗ್ಯಾಸ್ ಸ್ಟೇಷನ್‌ನಲ್ಲಿ ಅಕ್ಟೋಬರ್ 3ರಂದು ನಡೆದ ದರೋಡೆಯ ವೇಳೆ ಭಾರತೀಯ ವಿದ್ಯಾರ್ಥಿಯೊಬ್ಬ(27) ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದರೋಡೆಕೋರರ ಗುಂಡಿಗೆ ಬಲಿಯಾದವನನ್ನು ಚಂದ್ರಶೇಖರ್ ಪೋಲ್ ಎಂದು ಗುರುತಿಸಲಾಗಿದೆ. ಹೈದರಾಬಾದ್ ಮೂಲದ ವಿದ್ಯಾರ್ಥಿ ಡೆಂಟನ್‌ನ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡೇಟಾ ಅನಾಲಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.
ಡಲ್ಲಾಸ್‌ನ ಗ್ಯಾಸ್ ಸ್ಟೇಷನ್‌ನಲ್ಲಿ ವಿದ್ಯಾಭ್ಯಾಸದ ಜೊತೆಗೆ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಅಪರಿಚಿತ ಗುಂಪೊಂದು ಗ್ಯಾಸ್ ಸ್ಟೇಷನ್‌ನಲ್ಲಿ ದರೋಡೆ ನಡೆಸಿದ ವೇಳೆ ಗುಂಡು ಹಾರಿಸಲಾಗಿದ್ದು, ಚಂದ್ರಶೇಖರ್ ಪೋಲ್ ಮೃತಪಟ್ಟಿದ್ದಾನೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ದರೋಡೆ ಮತ್ತು ಸಾವಿನ ಕಾರಣದ ಹಿನ್ನೆಲೆಯ ಬಗ್ಗೆ ಸಕ್ರಿಯ ತನಿಖೆ ಮಾಡುತ್ತಿದ್ದೇವೆ. ಡಲ್ಲಾಸ್ ಕೌಂಟಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಶವವನ್ನು ಭಾರತಕ್ಕೆ ಕಳುಹಿಸುವ ಮೊದಲು ಸಾವಿಗೆ ನಿಖರ ಕಾರಣ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ನೆರವು-ಕಾನ್ಸುಲೇಟ್: ಹೂಸ್ಟನ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ (ಸಿಜಿಐ) ಕಚೇರಿ ಘಟನೆಯ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಮೃತದೇಹವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಕಚೇರಿ ತಿಳಿಸಿದೆ.
ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುವುದು. ಸ್ಥಳೀಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದೇವೆ. ಅಗತ್ಯ ದಾಖಲೆಗಳನ್ನು ತ್ವರಿತವಾಗಿ ಪಡೆಯಲಾಗುವುದು. ಹತ್ಯೆಯ ಕುರಿತು ತನಿಖೆ ಮುಂದುವರೆದಿದೆ. ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಬೆಂಬಲವಾಗಿ ಕಾನ್ಸುಲೇಟ್ ನಿಲ್ಲಲಿದೆ ಎಂದು ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.
ಮೃತದೇಹಗಳನ್ನು ಭಾರತಕ್ಕೆ ಕಳುಹಿಸಲು ಮರಣ ಪ್ರಮಾಣಪತ್ರ ಮತ್ತು ಕಾನ್ಸುಲೇಟ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವುದು ಕಡ್ಡಾಯ. ಇದರ ಜೊತೆಗೆ ಕೆಲ ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಭಾರತೀಯರ ಸರಣಿ ಸಾವು: ಅಮೆರಿಕದಲ್ಲಿ ಭಾರತೀಯರ ಸರಣಿ ಸಾವು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅರೆಕಾಲಿಕ ಉದ್ಯೋಗಗಳಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳ ಸುರಕ್ಷತೆಯು ಪ್ರಶ್ನಾರ್ಥಕವಾಗಿದೆ. ಇತ್ತೀಚೆಗೆ, ಚಿಕಾಗೋದಲ್ಲಿ ಸಾಯಿ ತೇಜ ನುಕಾರಪು ಮತ್ತು ವಿಸ್ಕಾನ್ಸಿನ್‌ನಲ್ಲಿ ಪ್ರವೀಣ್ ಕುಮಾರ್ ಅವರ ಹತ್ಯೆ ನಡೆದಿತ್ತು.
ಭಾರತೀಯ ವಿದ್ಯಾರ್ಥಿಗಳ ಸರಣಿ ಸಾವಿನ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅಧಿಕಾರಿಗಳು ವಿದೇಶಿಯರ ಸುರಕ್ಷತೆ ಬಗ್ಗೆ ಕ್ರಮವಹಿಸಲು ಕೋರಿದೆ.

