ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿನ್ನಾಭರಣ, ನಗದು ಸೇರಿದಂತೆ ಇತರೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ವಶಪಡಿಸಿಕೊಳ್ಳಲಾದ ಚಿನ್ನವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೇಂದ್ರ ವಲಯ ಐಜಿ ಲಾಬೂರಾಮ್ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದು, ದೂರು ಆಧರಿಸಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದ ತನಿಖೆಗೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಕುಖ್ಯಾತ ಕಳ್ಳ ಸುಧಾಕರನ್ ಮತ್ತು ಆತನ ಗ್ಯಾಂಗ್ ನ್ನು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಮಹಾಜನ್ ಬಂಧಿಸಿದ್ದರು.
ಇದರ ಜೊತೆಗೆ ಕಳ್ಳರು ನೀಡಿದ್ದ ಚಿನ್ನ ಖರೀದಿಸಿದ್ದ ಆರೋಪಿಗಳೂ ಸಿಕ್ಕಿದ್ದರು. ಆದರೆ ಆರೋಪಿಗಳು ಕದ್ದಿದ್ದ ಸುಮಾರು 2 ಕೆ.ಜಿ. ಚಿನ್ನದ ಪೈಕಿ 200 ಗ್ರಾಂಗಳಷ್ಟನ್ನು ಮಾತ್ರ ಸರ್ಕಾರಕ್ಕೆ ಮತ್ತು ಚಿನ್ನ ಕಳೆದುಕೊಂಡವರಿಗೆ ತೋರಿಸಲಾಗಿದೆ. ಉಳಿದಿದ್ದನ್ನುಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯೇ ಹಂಚಿಕೊಂಡಿರೋದಾಗಿ ದೂರಿನಲ್ಲಿ ದೂರುದಾರ ವಕೀಲ ಆರೋಪಿಸಿದ್ದಾರೆ. ಹಾಗಾಗಿ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳ ವಿರುದ್ಧ ಎಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ.

