ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ(ಜಾತಿಗಣತಿ ಸಮೀಕ್ಷೆ) ಅವಧಿ ವಿಸ್ತರಣೆ ಸಂಬಂಧ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಶ್ರೀ ವಾಲ್ಮೀಕಿ ಜಯಂತಿಯ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿರುವ ಮಹರ್ಷಿ ವಾಲ್ಮೀಕಿ ತಪೋವನದಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾತಿ ಸಮೀಕ್ಷೆ ಅವಧಿ ವಿಸ್ತರಣೆ ಸಂಬಂಧ ಸಭೆ ಕರೆದಿದ್ದೇನೆ. ಇವತ್ತು ಸಮೀಕ್ಷೆಗೆ ಡೆಡ್ಲೈನ್ ಇರುವುದರಿಂದ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶಿಕ್ಷಣ ಇಲಾಖೆ ಆದೇಶದ ಬಗ್ಗೆ ಗೊತ್ತಿಲ್ಲ. ಸಭೆಯಲ್ಲಿ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಸಿಎಂ ತಿಳಿಸಿದರು.
ಸನಾತನವಾದಿಗಳ ಕೈವಾಡ:
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಜೆಐ ಗವಾಯಿ ಅವರು ಆರೋಪಿಯನ್ನ ಕ್ಷಮಿಸಿದ್ದಾರೆ. ಆದರೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮನುವಾದಿಗಳ ಪ್ರಯತ್ನ ಇದು. ಇದರಿಂದ ಸಿಜೆ ಅವರು ವಿಚಲಿತರಾಗಿಲ್ಲ. ಕ್ಷಮೆ ಕೊಟ್ಟಿದ್ದಾರೆ, ಅದು ಅವರ ದೊಡ್ಡತನ. ಸನಾತನವಾದಿಗಳ ಕೈವಾಡ ಇದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಅಪರೂಪದ ಸಾಹಿತಿ:
ವಾಲ್ಮೀಕಿ ಪ್ರತಿಮೆಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಿದ್ದೇವೆ. ವಾಲ್ಮೀಕಿ ಅವರು ಅಪರೂಪದ ರಾಮಾಯಣ ರಚಿಸುವ ಮೂಲಕ ದೇಶಕಂಡತಂಹ ಅಪರೂಪದ ಸಾಹಿತಿಯಾಗಿದ್ದಾರೆ. ರಾಮಾಯಣವನ್ನು ಬರೆದು ಇಡೀ ಜಗತ್ತಿಗೆ ಪರಿಚಯಿಸಿದವರು. ವಾಲ್ಮೀಕಿಯವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ ಮಹಾನ್ ಕಾರ್ಯ ಮಾಡಿದ್ದಾರೆ. ರಾಮಾಯಣ ಬರೆದು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡಿದರು ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ವಾಲ್ಮೀಕಿ ಪ್ರತಿಮೆ ಈ ಜಾಗದಲ್ಲಿ ಮೊದಲು ಇರಲಿಲ್ಲ. 2017ರಲ್ಲಿ ನಮ್ಮ ಸರ್ಕಾರ ಇದ್ದಾಗ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿದ್ದೇವೆ. ಆ ನಂತರ ಕನಕದಾಸರ ಪ್ರತಿಮೆ ಮಾಡಲಾಯ್ತು. ಇವರೆಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡಿದ್ದರು. ಅವರು ಯಾವ ಮೌಲ್ಯಗಳಿಗೋಸ್ಕರ ಬದುಕಿದ್ದರೋ ಆ ಮೌಲ್ಯಗಳನ್ನು ಆಚರಣೆ ಮಾಡುವ ಪ್ರಯತ್ನವನ್ನು ನಾವೆಲ್ಲ ಮಾಡುತ್ತೇವೆ. ದಿನನಿತ್ಯ ಇವರನ್ನು ಶಾಸಕರು, ಸಚಿವರು ನೋಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾಯಕ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂಬ ವಿಚಾರವಾಗಿ ಸಿಎಂ ಅವರು ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ಮಾಡಿದಾಗ ನೋಡೊಣ ಎಂದು ಉತ್ತರಿಸಿದರು.
ಮಹರ್ಷಿ ವಾಲ್ಮೀಕಿ ತಪೋವನದಲ್ಲಿರುವ ಶ್ರೀ ವಾಲ್ಮೀಕಿ ಪ್ರತಿಮೆಗೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಗೌರವ ನಮನ ಸಲ್ಲಿಸಿದರು.

