ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನನ್ನ ಬಳಿ ಬರುವ ರೋಗಿಗಳಿಗೆ ತೊಂದರೆಯಗಬಾರದು ಎಂಬ ಉದ್ದೇಶ ದಿಂದ ನಾನು ವಾಟ್ಸಾಪ್ ಗ್ರೂಪಿನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಆದರೆ ನೂತನವಾಗಿ ಪ್ರಾರಂಭವಾಗುತ್ತಿರುವ ಹೀಲನ್ ಆಸ್ಪತ್ರೆ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದೇನೆಂದು ಆರೋಪ ನನ್ನ ಮೇಲೆ ಬಂದಿದೆ. ಈಗಾಗಲೇ ಸಂಬಂಧ ಪಟ್ಟವರಿಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಹೀಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಡಾ. ಎಂ ಬಿ ಅರ್ಜುನ್ ಹೇಳಿದರು.
ನಗರದ ಡಿ. ಕ್ರಾಸ್ ರಸ್ತೆಯ ಹೀಲ್ ಕ್ಲಿನಿಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಅರ್ಜುನ್ ಮಾತನಾಡಿ ನನ್ನ ಒಡೆತನದ ಹೀಲ್ ಕ್ಲಿನಿಕ್ ಪ್ರಾರಂಭವಾಗಿ ಸುಮಾರು ನಾಲ್ಕು ವರ್ಷಗಳಾಗಿವೆ. ನನ್ನ ಆಸ್ಪತ್ರೆಗೂ ಹಾಗೂ ನೂತನವಾಗಿ ಪ್ರಾರಂಭವಾಗುತ್ತಿರುವ ಹೀಲನ್ ಆಸ್ಪತ್ರೆಗೂ ಸುಮಾರು ಒಂದು ಕಿಲೋಮೀಟರ್ ಅಂತರವಿದೆ.
ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರಿಗೆ ತೊಂದರೆಯಗಬಾರದೆಂದು ಒಂದು ಪೋಸ್ಟ್ ಹಾಕಿದ್ದು ಸತ್ಯ. ಎರಡು ಆಸ್ಪತ್ರೆಗಳ ಹೆಸರಿನ ವ್ಯತ್ಯಾಸ ಸಾರ್ವಜನಿಕರಿಗೆ ಗೊತ್ತಾಗಲಿ ಎನ್ನುವ ಉದ್ದೇಶದಿಂದ ಹೀಲನ್ ಆಸ್ಪತ್ರೆಯ ಫೋಟೋ ಹಾಕಿದ್ದೆ ಅದುಬಿಟ್ಟರೆ ನನಗೆ ಹೀಲನ್ ಆಸ್ಪತ್ರೆಯ ಮಾಲೀಕರ ಬಗ್ಗೆ ಯಾವುದೇ ದ್ವೇಷವಿಲ್ಲ. ನನ್ನ ಒಂದು ಸಣ್ಣ ದೋಷವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಂಡಿದ್ದರಿಂದ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ನಾನು ಮೂಲತಹ ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಕುಟುಂಬದ ಅಮಾವಾಸ್ಯೆ ನೀಲಕಂಠಯ್ಯನವರ ಮಗಳ ಮೊಮ್ಮಗ. ಇಲ್ಲೇ ಹುಟ್ಟಿ ಬೆಳೆದು ಇಲ್ಲೇ ವೈದ್ಯಕೀಯ ಸೇವೆ ಸಲ್ಲಿಸಲು ಬಂದಿದ್ದೇನೆ. ನನಗೆ ಉನ್ನತ ವೈದ್ಯ ವೃತ್ತಿಗಾಗಿ ಬೇರೆ ದೇಶಗಳಿಂದ ಅಹ್ವಾನ ಬಂದಿತ್ತು.
ಅದನ್ನು ತಿರಸ್ಕರಿಸಿ ನಾನು ಹುಟ್ಟಿದ ಊರಿನ ಜನತೆಗೆ ಸೇವೆ ಮಾಡುವ ಉದ್ದೇಶದಿಂದ ಸುಮಾರು ನಾಲ್ಕು ವರ್ಷಗಳಿಂದ ಹೀಲ್ ಕ್ಲಿನಿಕ್ ಆಸ್ಪತ್ರೆಯನ್ನು ತೆರೆದು ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದ್ದೇನೆ. ಹೀಲ್ ಮತ್ತು ಹೀಲನ್ ಆಸ್ಪತ್ರೆಗಳ ಹೆಸರುಗಳ ಗೊಂದಲದಿಂದ ವಿಚಾರ ವೈರಲ್ ಆಗಿದೆ. ಈಗಾಗಲೇ ಇದಕ್ಕೆ ಸಂಬಂಧ ಪಟ್ಟಂತೆ ನನ್ನ ಮೇಲೆ ಡಾ. ವೆಂಕಟೇಶ್ ಪ್ರಸಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾನು ಪೊಲೀಸರಿಗೆ ಸೂಕ್ತ ಮಾಹಿತಿ ಕೊಟ್ಟಿದ್ದೇನೆ ಎಂದ ಡಾ. ಅರ್ಜುನ್ ಯಾವುದೇ ವ್ಯಕ್ತಿಗಾಗಲಿ
ಅಥವಾ ಸಂಸ್ಥೆಗಾಗಲಿ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಒಂದು ಸಂಸ್ಥೆಯನ್ನು ಕಟ್ಟುವುದು ಎಷ್ಟು ಶ್ರಮವಿದೆ ಎಂಬುದನ್ನು ನಾನು ಬಲ್ಲೆ. ಡಾ. ವೆಂಕಟೇಶ್ ಪ್ರಸಾದ್ ಸಹ ವೈದ್ಯರು. ನಮ್ಮಿಬ್ಬರ ಒತ್ತಾಸೆ ಯೊಂದೆ. ಅದು ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡುವುದು. ಆದ್ದರಿಂದ ನಮ್ಮಲ್ಲಿದ್ದ ಬಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.

