ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆಯ ಬಿಡದಿ ಸಮೀಪದಲ್ಲಿ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್- 12 ಶೋ ನಡೆಸುತ್ತಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿಲ್ಲ, ಹಲವು ರಕ್ಷಣಾ ಕ್ರಮಗಳನ್ನು ಅನುಸರಿಸಿಲ್ಲ ಎಂದು ತಾಲೂಕು ಆಡಳಿತ ಬಿಗ್ ಬಾಸ್ ಮನೆಗೆ ಬೀಗ ಹಾಕಿದೆ. ಜಾಲಿವುಡ್ ಸ್ಟುಡಿಯೋಗೆ ತಾಲೂಕು ಆಡಳಿತ ನೋಟಿಸ್ ನೀಡಲಾಗಿತ್ತು. ಇದೀಗ ಸ್ಟುಡಿಯೋಗೆ ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಬೀಗ ಜಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಗ್ ಬಾಸ್- 12ರ ಸ್ಪರ್ಧಿಗಳನ್ನು ಹೊರಗೆ ಕಳುಹಿಸಿ ಬೀಗ ಹಾಕಲಾಗಿದೆ.
ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳ ವಾಸ್ತವ್ಯಕ್ಕೆ ಈಗಲ್ ಟನ್ ರೆಸಾರ್ಟ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಯೋಜಕರು, ಸ್ಪರ್ಧಿಗಳನ್ನು ಕಾರಿನಲ್ಲಿ ಕರೆದೊಯ್ದು ಈಗಲ್ಟರ್ ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ – 12ರ ಶೋ ಆರಂಭವಾದ ಎರಡೇ ವಾರದಲ್ಲಿ ದೊಡ್ಡ ಮನೆಗೆ ಬೀಗ ಮುದ್ರೆ ಬಿದ್ದಿದೆ.
ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಬಿಗ್ ಬಾಸ್ ಮನೆಯಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆರೋಪದಡಿ ಬಿಡದಿಯ ಬಳಿಯ ಜಾಲಿವುಡ್ ಸ್ಟುಡಿಯೋ & ಅಡ್ವೆಂಚರ್ಸ್ ಪಾರ್ಕ್ ಬಂದ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ನಿತ್ಯ ಜಲಕ್ರೀಡೆಗೆ 2.50 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದ್ದು, ನಿಯಮಗಳ ಪ್ರಕಾರ ನೀರನ್ನು ಶುದ್ದೀಕರಣ ಮಾಡಿ ಪುನರ್ಬಳಕೆ ಮಾಡಬೇಕು. ಆದರೆ ಪುನರ್ಬಳಕೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ ಹಾಗೂ ಹಸಿ ಕಸ-ಒಣ ಕಸ ವಿಂಗಡಿಸದೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಹಾಗೂ ತ್ಯಾಜ್ಯಮಿಶ್ರಿತ ನೀರನ್ನು ಚರಂಡಿಗೆ ಬಿಟ್ಟಿರುವ ಆರೋಪ ಮಾಡಲಾಗಿದೆ.
ಮಂಗಳವಾರ ರಾತ್ರಿಯೇ ಬಿಗ್ ಬಾಸ್ ಮನೆ ಖಾಲಿ ಮಾಡಬೇಕೆಂದು ರಾಮನಗರ ತಹಶೀಲ್ದಾರ್ ತೇಜಸ್ವಿನಿ ಅವರು ಸೀಜ್ ಮಾಡಿದ್ದಾರೆ. ಅಲ್ಲದೆ ಅಧಿಕಾರಿಗಳ ಸೂಚನೆ ಮೇರೆಗೆ ಆಯೋಜಕರು ತುರ್ತು ಸಭೆ ನಡೆಸಿ ಎಲ್ಲಾ ಸ್ಪರ್ಧಿಗಳು, ಸಿಬ್ಬಂದಿಗಳನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಗಿದೆ.
ಜಾಲಿವುಡ್ ಸ್ಟುಡಿಯೋಸ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಸ್ಪರ್ಧಿಗಳು ಹಾಗೂ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿರುವ ಕುರಿತು ವರದಿಯಾಗಿದೆ.
ಒಂದು ವೇಳೆ ಸಮಸ್ಯೆ ಬಗೆಹರಿದರೆ ಮತ್ತೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಕರೆತರಲಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪೊಲೀಸ್ ಬಂದೋಬಸ್ತ್:
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.

