ಆರು ತಾಲೂಕುಗಳಲ್ಲಿ 112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಫಾರಸ್ಸು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 112 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ಸುತ್ತೋಲೆಯಂತೆ 1200ಕ್ಕೂ ಹೆಚ್ಚು ಮತದಾರರು ಇರುವ 107 ಮತಗಟ್ಟೆ ಹಾಗೂ 2 ಕಿ.ಮೀ.ಗಿಂತ ಹೆಚ್ಚಿನ ಅಂತರ ಇರುವ 5 ಹಳ್ಳಿಗಳ ಮತಗಟ್ಟೆಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಪಟ್ಟಿ ಸಿದ್ದಪಡಿಸಲಾಗಿದೆ. ಹೊಸ ಮತಗಟ್ಟೆಗಳ ಸ್ಥಾಪನೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೊಸ ಮತಗಟ್ಟೆಗಳ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಮೂಲಕ ಭಾರತೀಯ ಚುನಾವಣೆ ಆಯೋಗಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು.

- Advertisement - 

ಇದರಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 23, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 21, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 20, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 13, ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 18 ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 17 ಸೇರಿದಂತೆ ಒಟ್ಟು 112 ಹೊಸ ಮತಗಟ್ಟೆಗಳು ಸ್ಥಾಪನೆಯಾಗಲಿವೆ. ಇದರಿಂದ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ 1661 ರಿಂದ 1773 ಕ್ಕೆ ಏರಿಕೆಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಿದ್ಧತೆ :
2002
ರ ನಂತರ ದೇಶದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿಲ್ಲ. ಈ ಹಿನ್ನಲೆಯಲ್ಲಿ ಭಾರತೀಯ ಚುನಾವಣೆ ಆಯೋಗ ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಿದೆ. ಇತರೆ ರಾಜ್ಯಗಳಲ್ಲಿಯೂ ಪರಿಷ್ಕರಣೆಯನ್ನು ವಿಸ್ತರಿಸಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ 2002 ರ ಮತದಾರರ ಪಟ್ಟಿಯನ್ನು 2025 ರ ಮತದಾರರ ಪಟ್ಟಿಯೊಂದಿಗೆ ಹೋಲಿಸಿ ಡೇಟಾವನ್ನು ಸಿದ್ದಪಡಿಸಲಾಗಿದೆ.  

- Advertisement - 

ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವೇಳೆ ಮತಗಟ್ಟೆ ಅಧಿಕಾರಿಗಳು, ಪ್ರತಿ ಮನೆಗಳಿಗೂ ಭೇಟಿ ನೀಡಿ 18 ವರ್ಷದ ಮೇಲ್ಪಟ್ಟವರ ವಿವರ ಸಂಗ್ರಹಿಸಲಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳು ಸಹ ಬೂತ್ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತಗಟ್ಟೆ ಅಧಿಕಾರಿಗಳು ಏಜೆಂಟರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಇದೇ ವೇಳೆ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದೆ. ನಮೂನೆ-18 ರಲ್ಲಿ  ಹೆಸರು ಸೇರ್ಪಡೆಗೆ ನವೆಂಬರ್ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು, ನಗರಸಭೆ ವ್ಯಾಪ್ತಿಯಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ನಿರ್ಧಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ. ನಮೂನೆ-18 ಅರ್ಜಿಗಳು ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ದೊರಕಲಿವೆ. ಅರ್ಹ ಪದವಿಧರ ಮತದಾರರು, ತಮ್ಮ ಹೆಸರು ನೊಂದಾಯಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಮಾಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಚುನಾವಣೆ ತಹಶೀಲ್ದಾರ್ ಡಾ.ನಾಗವೇಣಿ, ಚುನಾವಣೆ ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ. ನಾಸೀರುದ್ದೀನ್, ಜೆ.ಡಿ.ಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿ.ಜೆ.ಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಯಶವಂತ್ ಕುಮಾರ್, ಬಿ.ಜೆ.ಪಿ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಕೆ.ಎಂ. ಪರುಶುರಾಮ್, ಸಿಪಿಎಂ ಡಿ.ಓ.ಸಿ ಸಿ.ಕೆ. ಗೌಸ್‍ಪೀರ್ ಇದ್ದರು.

 

Share This Article
error: Content is protected !!
";