ಸಿಜೆ ಗವಾಯಿ ಮೇಲೆ ಶೂ ದಾಳಿ ಸಂವಿಧಾನಕ್ಕೆ ಧಕ್ಕೆ-ಬಾಳೆಕಾಯಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ನಡೆದಿರುವಂತಹ ಶೂ ದಾಳಿಯು ಭಾರತದ ಸಂವಿಧಾನವನ್ನು ಅಭದ್ರಗೊಳಿಸುವ ಕುಕೃತ್ಯವಾಗಿದೆ ಎಂದು ದಲಿತ ಮುಖಂಡ ಬಾಳೆಕಾಯಿ ಶ್ರೀನಿವಾಸ್ ಆರೋಪಿಸಿದರು.

ಕಾನೂನು ವಿದ್ಯಾರ್ಥಿಗಳ ವೇದಿಕೆ ಮತ್ತು ಸಮಾನ ಮನಸ್ಕರ ವೇದಿಕೆ ಇವರ ವತಿಯಿಂದ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ, ಪ್ರತಿಭಟನಾ ರ್‍ಯಾಲಿಯ ಆರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಮಾತನಾಡಿದರು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರು ಬುದ್ಧನ ಅನುಯಾಯಿಗಳಾಗಿದ್ದು, ಹಾಗೆಯೇ ಭಾರತದ ಸಂವಿಧಾನವನ್ನು ಚಾಚು ತಪ್ಪದೇ ಪಾಲಿಸುವಂತಹ ಕಟ್ಟಾಳಾಗಿದ್ದಾರೆ.

- Advertisement - 

ದೇಶದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಗವಾಯಿಯವರು ನೇಮಕವಾದಾಗಿನಿಂದ ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಅಲ್ಲಾಡಿಸುವಂತಹ ಕುಕೃತ್ಯವನ್ನು ನಿರಂತವಾಗಿ ಮಾಡುತ್ತಾ ಬಂದಿದ್ದಾರೆ. ಆದರೂ ಕೂಡ ಗವಾಯಿಯವರು ಎಲ್ಲೂ ಕೂಡ ವಿಚಲಿತರಾಗದೇ ಕಾನೂನು ನ್ಯಾಯ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಗವಾಯಿಯವರ ಮೇಲೆ ನಡೆದಿರುವಂತಹ ಶೂ ಎಸೆಯುವ ಕೃತ್ಯ ಹಲ್ಲೆ ನಡೆಸುವ ಪ್ರಯತ್ನಗಳು ಮಾನಸಿಕವಾಗಿ ಕೊಳಕುತನವಾಗಿದ್ದು, ಇಂತಹವರಿಂದ ದೇಶದ ಅಭಿವೃದ್ಧಿ ಅಸಾಧ್ಯವೆಂದು ಶ್ರೀನಿವಾಸ್ ಹೇಳಿದರು.

ನಿವೃತ್ತ ಪ್ರಾಚಾರ್ಯ ಹಾಗೂ ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಕಂಡ ದೇಶ. ಹಾಗೆಯೇ ಇಲ್ಲಿ ಎಲ್ಲರೂ ಸಮಾನರು ಎಂಬ ಮನೋಭಾವನೆಯಿಂದ ಬದುಕು ನಡೆಸುತ್ತಿದ್ದಾರೆ. ಈ ಮಧ್ಯೆ ದೇಶದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಮತ್ತು ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ತರುವ ಕಾರಣಗಳಿಗಾಗಿ ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸುವಂತಹ ಪ್ರಯತ್ನ ಮಾಡಿರುವುದು ಮನುಕುಲಕ್ಕೆ ಅವಮಾನವೆಂದು ಯಾದವರೆಡ್ಡಿ ಹೇಳಿದರು.

- Advertisement - 

ದೇಶದ ನ್ಯಾಯಾಂಗ ವ್ಯವಸ್ಥೆ ಭಾರತದ ಸಂವಿಧಾನದ ಅಡಿಪಾಯದ ಮೇಲೆ ನಿಂತಿದ್ದು, ಇದನ್ನು ಅಲುಗಾಡಿಸುವ ಪ್ರಯತ್ನಮಾಡಿದರೆ ದೇಶ ನೆಮ್ಮದಿಯಾಗಿ ಉಳಿಯಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಸಂಯಮದಿಂದ ನಡೆದುಕೊಳ್ಳಬೇಕು. ಹಾಗೆಯೇ ಶೂ ಎಸೆದಿರುವಂತಹ ವಕೀಲ ಕಿಶೋರ್ ಪ್ರಜ್ಞಾಪೂರಕವಾಗಿಯೇ ಕುಕೃತ್ಯ ನಡೆಸಿದ್ದಾರೆ. ಆದ್ದರಿಂದ ಇಂತಹ ಘಟನೆಗಳು ಪುನಾರಾವರ್ತನೆಯಾಗದೇ ಸಂಘಟಿತ ಹೋರಾಟ ಮತ್ತು ಪ್ರತಿರೋಧದಿಂದ ನಿಯಂತ್ರಿಸಲು ಸಾಧ್ಯವಿದೆ ಎಂದು ಯಾದವರೆಡ್ಡಿ ಹೇಳಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಈ ದೇಶದ ಪ್ರಧಾನಿಗಳು ಹೊರಜಗತ್ತಿಗೆ ಹೋದಾಗ ನಾನು ಬುದ್ಧನ ಭೂಮಿಯಿಂದ ಬಂದಂತವನು. ಶಾಂತಿಯೇ ನಮ್ಮ ಆದ್ಯತೆ ಎಂಬ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ದೇಶದ ಒಳಗೆ ಸಂವಿಧಾನಕ್ಕೆ ಭದ್ರತೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾದರೂ ಚಕಾರವೆತ್ತದೇ ಮೌನವಾಗಿರುವುದು ಖೇದಕರ ಎಂದರು.

ಭಾರತ ಶಾಂತಿ ಮತ್ತು ಸೌಹಾರ್ದತೆಯ ಭೂಮಿ ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಮತ್ತು ದೌರ್ಜನ್ಯದಮತಹ ಕುಕೃತ್ಯಗಳಿಗೆ ಅವಕಾಶಗಳಿಲ್ಲ. ಈ ಭೂಮಿಯಲ್ಲಿ ಪ್ರತಿಯೊಬ್ಬರು ನೆಮ್ಮದಿ ಮತ್ತು ಸಮಾನತೆಯಿಂದ ಬದುಕಬೇಕಾದರೆ ಸೌಹಾರ್ದತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನಾ ರ್‍ಯಾಲಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಅಫಾನ್ ಅಲಿ, ಸುಬಾನುಉಲ್ಲಾ, ಪೌರಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಕೆ.ರಾಜಣ್ಣ, ಅಧ್ಯಕ್ಷ ಜಗದೀಶ್, ಲಂಕೇಶ್ ಮತ್ತು ಕಾನೂನು ವೇದಿಕೆಯ ಪದಾಧಿಕಾರಿಗಳು, ಕಾನೂನು ವಿದ್ಯಾರ್ಥಿ ಪರಶುರಾಮ್ ಮತ್ತು ನೂರಾರು ಜನ ಕಾರ್ಯಕರ್ತರು ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

 

 

Share This Article
error: Content is protected !!
";