ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಚಿವ ಕೆಎನ್ ರಾಜಣ್ಣ ನೇರ, ನಿಷ್ಠುರ ಮಾತು, ನಡೆನುಡಿಗೆ ಹೆಸರಾದವರು.
ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ಆರಂಭವಾದ ನಂತರ ಪಕ್ಷದ ಹೈಕಮಾಂಡ್ ವಿರುದ್ಧ ರಾಜಣ್ಣ ಮಾತುಗಳು ತೀಕ್ಷ್ಣವಾಗಿದ್ದವು. ಸಿದ್ದರಾಮಯ್ಯ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಸಿದ್ದರಾಮಯ್ಯನವರ ವಿಚಾರಕ್ಕೆ ಹೈಕಮಾಂಡ್ ಎದುರು ಹಾಕಿಕೊಂಡಿದ್ದರು.
ರಾಜಣ್ಣ ಅವರು ಪಕ್ಷದ ವರಿಷ್ಠರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಲೇ ಬಂದಿದ್ದರು.
ಡಿಕೆಶಿ ಬಣ ಸಿಎಂ ಬದಲಾವಣೆ ಮಾತುಗಳನ್ನಾಡಿದಾಗ ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದರು. ಇಂತಹ ಮಾತುಗಳ ಹೊರ ಬಂದಾಗಲೆಲ್ಲ ರಾಜಣ್ಣ ಮೂಲಕ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ.
ಮುಖ್ಯಮಂತ್ರಿ ಮನಸ್ಸಿನಲ್ಲಿ ಇರುವುದು ರಾಜಣ್ಣ ಮೂಲಕ ಹೊರಗೆ ಬರುತ್ತಿದೆ ಎಂದು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಅವರ ಹೇಳಿಕೆಗಳು ಅದನ್ನು ಧ್ವನಿಸುತ್ತವೆ ಎಂದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಈ ಮಟ್ಟಿಗೆ ರಾಜಣ್ಣ ಅವರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದರು.
ಆದರೆ ಇದೀಗ ಕೆ.ಎನ್.ರಾಜಣ್ಣ ಅವರಿಗೆ ಅದೇನು ಆಯ್ತೋ ಏನೋ ಸಿದ್ದರಾಮಯ್ಯನವರು ಮೊದಲಿನಂತೆ ಇಲ್ಲ ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದು ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

