ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಳುವ ಸರ್ಕಾರಗಳು ಶೋಷಿತರು, ಬಹುಸಂಖ್ಯಾತರ ವಿರುದ್ದ ಕಾನೂನುಗಳನ್ನು ಜಾರಿಗೆ ತರುತ್ತಿರುವುದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕಾನ್ಷಿರಾಂರವರ ೧೯ ನೇ ಪರಿನಿಬ್ಬಾಣದ ದಿನವಾದ ಗುರುವಾರದಿಂದ ಡಿ. ೬, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣದವರೆಗೂ ಜಾತಿ ಜನಾಂಗದ ಜನಸಂಖ್ಯೆಗನುಗುಣವಾಗಿ ತಕ್ಕ ಪಾಲು, ಎಲ್ಲರಿಗೂ ಬೇಕು ಗೌರವದ ಬಾಳು ಬಹುಜನ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಅಸಂಘಟಿತರನ್ನು ಸಂಘಟಿಸಿ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಕಾನ್ಷಿರಾಂ ಮಾಡಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಸಮಾನವಾದ ಪಾಲು ಸಿಗಬೇಕೆನ್ನುವುದು ಆಂದೋಲನ ಉದ್ದೇಶ. ರಾಜ್ಯದ ಮೂಲೆ ಮೂಲೆಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಬಹುಜನರ ಹಾಗೂ ಶೋಷಿತರ ಸ್ಥಿತಿಗತಿಗಳ ಕುರಿತು ಅರಿವು ಮೂಡಿಸಲಾಗುವುದೆಂದರು.
ಆಳುವ ಸರ್ಕಾರಗಳು ಶೋಷಿತರನ್ನು ಹೇಗೆ ವಂಚಿಸುತ್ತ ಬರುತ್ತಿವೆ ಎನ್ನುವುದನ್ನು ದಲಿತರಿಗೆ ಮನವರಿಕೆ ಮಾಡಿಕೊಡಲು ಆಂದೋಲನ ಹಮ್ಮಿಕೊಂಡಿದ್ದು, ಕಾನ್ಷಿರಾಂರವರ ಕನಸಿನಂತೆ ಅಧಿಕಾರ ಹಿಡಿಯಬೇಕಾಗಿರುವುದರಿಂದ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದೆಂದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಕೆ.ಎನ್.ದೊಡ್ಡೆಟ್ಟಪ್ಪ, ಲಕ್ಷ್ಮಮ್ಮ ಹನುಮಂತರಾಯ, ರಾಘವೇಂದ್ರ, ಮಲ್ಲಿಕಾರ್ಜುನ, ಚಂದ್ರಣ್ಣ, ಪರಮೇಶ್ವರಪ್ಪ, ಕೂನಬೇವು ಮಹಾಂತೇಶ್, ಜಗದೀಶ್, ರಾಜೇಶ್, ಜಯಣ್ಣ, ಸತೀಶ್, ರಾಮಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

