ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ರೈತರನ್ನು ಸ್ವಾವಲಂಬನೆಗೊಳಿಸಲು ಆರಂಭಿಸಿರುವ ಪಿಎಂ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ರಾಷ್ಟ್ರೀಯ ಯೋಜನೆಯಡಿ ದೇಶದ 100 ಜಿಲ್ಲೆಗಳೊಂದಿಗೆ ತುಮಕೂರು ಜಿಲ್ಲೆಯನ್ನೂ ಆಯ್ಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್‌ಚೌಹಾಣ್‌ಅವರಿಗೆ ತುಮಕೂರು ಜಿಲ್ಲೆಯ ರೈತರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಹತ್ವಾಕಾಂಕ್ಷಿ ಪಿಎಂ ಧನ ಧಾನ್ಯ ಕೃಷಿ ಯೋಜನೆಗೆ ಇದೇ ಅಕ್ಟೋಬರ್ 11ರ ಶನಿವಾರದಂದು ದೆಹಲಿಯಲ್ಲಿ ಜರುಗುವ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.
ತಿಪಟೂರಿನಲ್ಲಿ ಜರುಗುವ ಈ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ತುಮಕೂರು ಜಿಲ್ಲೆಯ ಸಮಸ್ತ ರೈತ ಬಾಂಧವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೇಂದ್ರ ಸಚಿವರು ಕೋರಿದ್ದಾರೆ.
ಈ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜಿಲ್ಲೆಯ ರೈತರ ಆದಾಯ ದ್ವಿಗುಣಗೊಳಿಸಲು, ಕೃಷಿ ಬೀಜಗಳು, ರಸಗೊಬ್ಬರ, ಕೃಷಿ ಪರಿಕರಗಳು ಹಾಗೂ ಧಾನ್ಯಗಳ ಸಂಗ್ರಹ, ಮಾರುಕಟ್ಟೆಗೆ ಸಂಬಂಧಿಸಿದಂತೆ ಇನ್ನಿತರೆ ವಿಷಯಗಳಲ್ಲಿ ಅವರ ಬೆಂಬಲಕ್ಕೆ ನಿಲ್ಲಲು ಹಲವು ಕಾರ್ಯಕ್ರಮಗಳನ್ನು ನಮ್ಮ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಅಲ್ಲದೇ, ಬೇಳೆ ಕಾಳುಗಳ ಬೆಳೆಯಲ್ಲಿ ಆತ್ಮನಿರ್ಭರ ಭಾರತ ಸೃಷ್ಠಿಸಬೇಕೆನ್ನುವ ದೃಷ್ಠಿಯಿಂದ ದ್ವಿದಳ ಧಾನ್ಯಗಳ ರಾಷ್ಟ್ರೀಯ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ ಎಂದು ವಿ ಸೋಮಣ್ಣ ತಿಳಿಸಿದ್ದಾರೆ.

