ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶಾದ್ಯಂತ 6 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ಕಿ.ಮೀ ಉದ್ದದ 26 ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಪಿಎಚ್ಡಿಸಿಸಿಐನ 120ನೇ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಋತುಮಾನದಲ್ಲಿಯೂ ದೇಶದ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ, ಲಡಾಖ್ನಲ್ಲಿ ನಿರ್ಮಾಣವಾಗುತ್ತಿರುವ ಝೊಜಿಲಾ ಟನಲ್‌ಕಾರ್ಯ ಶೇ.75-80ರಷ್ಟು ಮುಗಿದಿದೆ ಎಂದು ಕೇಂದ್ರ ಸಚಿವ ಗಡ್ಕರಿ ಅವರು ಮಾಹಿತಿ ನೀಡಿದರು.
ದೇಶಾದ್ಯಂತ ಎಕ್ಸ್ಪ್ರೆಸ್ವೇ ಮತ್ತು ಆರ್ಥಿಕ ಕಾರಿಡಾರ್ಗಳ ನಿರ್ಮಾಣದಿಂದಾಗಿ ಸರಕು ಸಾಗಣೆ ವೆಚ್ಚ ಈ ಹಿಂದೆ ಇದ್ದ ಶೇ.16ಕ್ಕಿಂತ ಇದೀಗ ಶೇ.10ರಷ್ಟು ಕಡಿಮೆಯಾಗಿದೆ. ಡಿಸೆಂಬರ್ನಲ್ಲಿ ಸರಕು ಸಾಗಣೆ ವೆಚ್ಚ ಶೇ.9ಕ್ಕೆ ಇಳಿಯಲಿದೆ. ಇದು ಭಾರತವನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿ ಮಾಡಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಅಮೆರಿಕದಲ್ಲಿ ಸರಕು ಸೇವೆ ಸಾಗಣೆ ವೆಚ್ಚ ಶೇ.12ರಷ್ಟಿದ್ದರೆ, ಯುರೋಪಿನ ದೇಶಗಳಲ್ಲಿ ಶೇ.8 ಮತ್ತು ಚೀನಾದಲ್ಲಿ ಶೇ.10ರಷ್ಟಿದೆ ಎಂದು ಸಚಿವರು ತಿಳಿಸಿದರು.
ಭಾರತೀಯ ಆಟೋಮೊಬೈಲ್ ವಲಯದ ಕುರಿತು ಮಾತನಾಡಿದ ಗಡ್ಕರಿ ಅವರು, ಮುಂದಿನ ಐದು ವರ್ಷದಲ್ಲಿ ಜಗತ್ತಿನ ನಂಬರ್ 1 ಆಟೋ ಮೊಬೈಲ್ ಉದ್ಯಮವಾಗಿ ಭಾರತವನ್ನು ರೂಪಿಸುವ ಗುರಿ ಇದೆ. ನಾನು ಸಾರಿಗೆ ಸಚಿವನಾಗಿ ಅಧಿಕಾರವಹಿಸಿಕೊಂಡಾಗ ಭಾರತದ ಆಟೋ ಮೊಬೈಲ್ ಉದ್ಯಮ 14 ಲಕ್ಷ ಕೋಟಿ ರೂ ಗಾತ್ರ ಹೊಂದಿತ್ತು. ಇದೀಗ ಈ ವಲಯದ ಗಾತ್ರ 22 ಲಕ್ಷ ಕೋಟಿ ರೂ ಆಗಿದೆ. ಆಟೋಮೊಬೈಲ್ ವಲಯ 4 ಲಕ್ಷ ಯುವ ಜನತೆಗೆ ಉದ್ಯೋಗ ಒದಗಿಸಿದ್ದು, ರಾಜ್ಯ ಮತ್ತು ಕೇಂದ್ರಕ್ಕೆ ಹೆಚ್ಚಿನ ಪ್ರಮಾಣದ ಜಿಎಸ್ಟಿ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
ಪಳೆಯುಳಿಕೆ ಇಂಧನಗಳ ಮೇಲೆ ಭಾರತ ದೇಶ ಅವಲಂಬಿತವಾಗಿದ್ದು, ಇದು ಆರ್ಥಿಕ ಒತ್ತಡ ಹೆಚ್ಚಿಸುತ್ತಿದೆ. ಇಂಧನಗಳ ಆಮದಿಗೆ ವಾರ್ಷಿಕವಾಗಿ 22 ಲಕ್ಷ ಕೋಟಿ ರೂ ವ್ಯಯಿಸಲಾಗುತ್ತಿದೆ. ಇವುಗಳು ಪರಿಸರದ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿದೆ. ಶುದ್ದ ಇಂಧನದ ಅಳವಡಿಕೆ ದೇಶದ ಪ್ರಗತಿಗೆ ನಿರ್ಣಾಯಕ ಎಂದು ಸಚಿವರು ಅಭಿಪ್ರಾಯಪಟ್ಟರು.
ಭಾರತ ದೇಶದ ಜಿಡಿಪಿ ಬೆಳವಣಿಗೆಗಾಗಿ ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕಿದೆ. ಎಥೆನಾಲ್ ಉತ್ಪಾದನೆಯ ಮೂಲಕ ಕೃಷಿಕರು ಹೆಚ್ಚುವರಿಯಾಗಿ 45 ಸಾವಿರ ಕೋಟಿ ರೂ. ಸಂಪಾದಿಸಬಹುದು. ಇದರಿಂದ ದೇಶದ ಗಂಭೀರ ಸಮಸ್ಯೆಯಾದ ವಾಯುಮಾಲಿನ್ಯ ತಗ್ಗಿಸುವುದು ಸರ್ಕಾರದ ಪ್ರಮುಖ ಆದ್ಯತೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

