ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
11ನೇ ವರ್ಷದ ಶ್ರೀ ಬಗಳಮುಖಿ ದೇವಿಯ ಆರಾಧನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ನವರಾತ್ರಿ ಪ್ರಯುಕ್ತ ಬಗಳಮುಖಿ ದೇವಿಯ ಆರಾಧನೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸುಮಂಗಲಿಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ, ನವ ದುರ್ಗೆಯರ ವಿಶೇಷ ಹೋಮ, ನಂತರ ದುರ್ಗ ಹೋಮವನ್ನು ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟರಾದ ನೆ.ಲ. ನರೇಂದ್ರ ಬಾಬು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ದೇವಿಯ ಜಾತ್ರೆಯನ್ನು ಬಹಳ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ನವ ದುರ್ಗೆಯರನ್ನು ಸ್ಮರಿಸುತ್ತಾ ಸುಮಂಗಲಿರಿಗೆ ಬಾಗಿನ ಅರ್ಪಿಸುವುದು ಇಲ್ಲಿನ ವಿಶೇಷತೆಯಾಗಿದೆ . ಇಂದಿನ ಕಾರ್ಯಕ್ರಮದಲ್ಲಿ ಕೇವಲ ತಾಲೂಕು ಅಷ್ಟೇ ಅಲ್ಲದೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿರುವುದು ಜನರ ಭಕ್ತಿ ಹಾಗೂ ತಾಯಿಯ ಶಕ್ತಿಯನ್ನು ತೋರಿಸುತ್ತದೆ ಎಂದರು .
ಅಗ್ನಿವಂಶ ತಿಗಳ ಕ್ಷತ್ರಿಯ ಸಮುದಾಯದ ಮುಖಂಡರಾದ ದೇಶದ ಮನೆ ಯಜಮಾನ್ ಗಂಗಾ ಹನುಮಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇವಿಯ ಆರಾಧನೆಯನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಧಾನ ಅರ್ಚಕರಾದ ಸುಬ್ರಮಣಿ ಹೊತ್ತು ಸುಸೂತ್ರವಾಗಿ ನಡೆಸುತ್ತಿದ್ದಾರೆ . ಇಂತಹ ಆಚರಣೆಗಳು ಮುಂದೆ ಮತ್ತಷ್ಟು ಹೆಚ್ಚಾಗಲಿ ದೇವಿ ಬಗಳಮುಖಿಯ ಕೀರ್ತಿ ಎಲ್ಲೆಡೆ ಪಸರಿಸಲಿ ಎಂದರು.
ಅಗ್ನಿವಂಶ ತಿಗಳ ಕ್ಷತ್ರಿಯ ಸಮುದಾಯದ ಹದಿನೆಂಟು ಗಡಿ ಯಜಮಾನ ಜಗದೀಶ್ ಮಾತನಾಡಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬಂದಿದ್ದು 11ನೇ ವರ್ಷದ ಶ್ರೀ ಬಗಳಾ ಮುಖಿ ಆರಾಧನೆ ಅತ್ಯಂತ ಸಂತೋಷ ಹಾಗೂ ಸಡಗರದಿಂದ ಸಾಗುತ್ತಿದೆ. ಈ ಸಂಭ್ರಮಾಚರಣೆ ಕೇವಲ ಗ್ರಾಮಕ್ಕೆ ಸೀಮಿತವಾಗದೆ ರಾಜ್ಯಮಟ್ಟದಲ್ಲಿ ಸಂಭ್ರಮಿಸುವಂತಾಗಲಿ ಎಂದರು.
ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣಿ ಮಾತನಾಡಿ ಪ್ರತಿ ವರ್ಷವೂ ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆ ಮಾಡಲಾಗುವುದು ಈ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗುವುದು . ಪ್ರತಿ ವರ್ಷವೂ ಭಕ್ತಾದಿಗಳ ಸಂಖ್ಯೆ ಹೆಚ್ಚುತಲೆ ಇದೆ ಈ ಬಾರಿಯೂ ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆಯುತ್ತಿದ್ದಾರೆ ಈ ಬೆಳವಣಿಗೆ ನಮಗೆ ಸಂತಸ ತಂದಿದೆ ಎಂದರು.
ಸ್ಥಳೀಯ ಮಾಜಿ ಅಧ್ಯಕ್ಷರು ಹಾಗೂ ಯೂಥ್ ಕಾಂಗ್ರೆಸ್ ಮುಖಂಡರಾದ ವಿಜಿ ಕುಮಾರ್, ಸ್ಥಳೀಯ ಮಾಜಿ ಸದಸ್ಯರಾದ ಸುಬ್ಬಣ್ಣ, ವಕೀಲರದ ದೇವನಹಳ್ಳಿ ಮಂಜುನಾಥ್ , ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸಿ ಮಂಜಣ್ಣ , ಅಗ್ನಿವಂಶ ಕ್ಷತ್ರಿಯ (ತಿಗಳರ ) ಗಜಕೇಸರಿ ಸೇನೆಯ ರಾಜ್ಯ ಕಾರ್ಯದರ್ಶಿ ಕೆ ಆರ್ ಮಧುಸೂಧನ್, ನೆಲಮಂಗಲ ಯಜಮಾನ್ ಉಮೇಶ್ ಸೇರಿದಂತೆ ಸ್ಥಳೀಯ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

