ಚಂದ್ರವಳ್ಳಿ ನ್ಯೂಸ್, ರಾಮನಗರ:
ಗ್ಯಾಸ್ ಸೋರಿಕೆ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಭೀಮನಹಳ್ಳಿ ಬಳಿ ಶೆಡ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಪಶ್ಚಿಮ ಬಂಗಾಳ ಮೂಲದ 7 ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು.
ಈ ಪೈಕಿ ಮೂವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮನುರುಲ್ ಶೇಖ್, ಜಾವಿದ್ ಅಲಿ ಹಾಗೂ ತಜ್‌ಬುಲ್ ಮೃತರು.
ಕಳೆದ ಅ.ರಂದು ಮಂಗಳವಾರ ಖಾಸಗಿ ಲೇಔಟ್‌ವೊಂದರಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಶೆಡ್ ನಲ್ಲಿ ವಾಸವಾಗಿದ್ದರು. ಆದ್ರೆ, ಗ್ಯಾಸ್ ಲೀಕ್ ಆಗಿ ಈ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 7 ಕಾರ್ಮಿಕರಿಗೆ ಸುಟ್ಟಗಾಯಗಳಾಗಿದ್ದವು. ಕೂಡಲೇ ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

