ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಲೆಮಾರಿ, ಅರೆ ಅಲೆಮಾರಿ ೫೯ ಜಾತಿಗಳಿಗೆ ಶೇ.೧ ರಷ್ಟು ಪ್ರತ್ಯೇಕ ಮೀಸಲಾತಿ ಹಾಗೂ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿ ಒಂದು ವರ್ಷಗಳ ನಂತರ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಟಾನಗೊಳಿಸಿದ್ದು, ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ಅನ್ಯಾಯವೆಸಗಿದೆ.
ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳಿಗೆ ಸಾಮಾಜಿಕ ನ್ಯಾಯ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ನಾಗಮೋಹನ್ದಾಸ್ ಆಯೋಗ ದತ್ತಾಂಶ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯನ್ನು ರಾಜ್ಯ ಸಚಿವ ಸಂಪುಟ ಮಾರ್ಪಡಿಸಿ ಒಳ ಮೀಸಲಾತಿ ಜಾರಿಗೊಳಿಸಿರುವುದು ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದಿರುವ ಚನ್ನದಾಸ, ಬುಡ್ಗಜಂಗಮ, ದಕ್ಕಲರು, ಮಾಲದಾಸರು,
ಹೊಲಿಯದಾಸರು, ಡಂಬರು, ಸಿಳ್ಳೆಕ್ಯಾತರು, ಸಿಂಧೂಳು ಇನ್ನು ಮುಂತಾದ ೫೯ ಜಾತಿಗಳು ತಮಗಾಗಿರುವ ಶೋಷಣೆಯ ವಿರುದ್ದ ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೇ.೧ ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಜಿ.ಗುರುಮೂರ್ತಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಪರಶುರಾಮ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹಿರಿಯೂರು ತಾಲ್ಲೂಕು ಅಧ್ಯಕ್ಷ ಕಣುಮೇಶ್, ಜಿಲ್ಲಾ ಗೌರವಾಧ್ಯಕ್ಷ ಚಂದ್ರಪ್ಪ ಚೋಳುಗುಡ್ಡ, ಜಯಪ್ರಕಾಶ್ ಜೆ.ಪಿ. ಪ್ರದೀಪ್ ಆರ್. ಹನುಮಂತಪ್ಪ ಕಲ್ಲಹಟ್ಟಿ, ಏಕಾಂತ್, ಭೀಮರಾಜ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

