ಚಂದ್ರವಳ್ಳಿ ನ್ಯೂಸ್, ಕೋಲ್ಕತ್ತಾ:
ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕುರಿತು ಪ್ರತಿಕ್ರಿಯಿಸಿ, ರಾತ್ರಿ ಸಮಯದಲ್ಲಿ ಒಂಟಿ ಹುಡುಗಿಯನ್ನು ಹೊರಗೆ ಹೋಗಲು ಬಿಡಬಾರದು. ಹೆಣ್ಣುಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದು ಮುಖ್ಯಮಂತ್ರಿಗಳು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರ ನಡೆದಿರುವುದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ. ಹೀಗಾಗಿ, ಇದಕ್ಕೆ ನಮ್ಮ ಸರ್ಕಾರ ದೂಷಿಸುವುದು ಅನ್ಯಾಯ. ಖಾಸಗಿ ಕಾಲೇಜು ಅಧಿಕಾರಿಗಳು ಆಕೆಯ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕಾಗಿತ್ತು. ಮಧ್ಯರಾತ್ರಿ 12.30ಕ್ಕೆ ಆ ಹುಡುಗಿ ಏಕೆ ಹೊರಗೆ ಬಂದಳು? ಹಾಗಾದರೆ, ಕಾಲೇಜಿನಲ್ಲಿ ಭದ್ರತೆ ವ್ಯವಸ್ಥೆ ಇಲ್ಲವೇ? ಆ ದಿನ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಹುಡುಗಿಯರು ರಾತ್ರಿ ವೇಳೆ ಕಾಲೇಜಿನಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ ಎಂದು ಮಮತಾ ಅವರು ಹೇಳಿದರು.
ರಾತ್ರಿ ಸಮಯದಲ್ಲಿ ಹುಡುಗಿಯರು ಹೊರಗೆ ಹೋಗಲು ಬಿಡಬಾರದು. ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಸುತ್ತ ಅರಣ್ಯ ಪ್ರದೇಶವಿದೆ. ಪೊಲೀಸರು ಎಲ್ಲ ಜನರನ್ನು ಶೋಧಿಸುತ್ತಿದ್ದಾರೆ. ಯಾರನ್ನೂ ಕ್ಷಮಿಸಲಾಗುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನ ಬಂಧಿಸಲಾಗಿದೆ. ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ದೇಶದ ನಾನಾ ಭಾಗಗಳು ಸೇರಿದಂತೆ ಮಣಿಪುರ, ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಆಗ ಅಲ್ಲಿನ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಂಡಿತ್ತು? ನಮ್ಮ ರಾಜ್ಯದಲ್ಲಿ, ನಾವು 1-2 ತಿಂಗಳೊಳಗೆ ಜನರ ವಿರುದ್ಧ ಚಾರ್ಜ್‌ಶೀಟ್ ಹಾಕಿದ್ದೇವೆ ಮತ್ತು ಕೆಳ ನ್ಯಾಯಾಲಯವು ಆರೋಪಿಗಳನ್ನು ಗಲ್ಲಿಗೇರಿಸಲು ಆದೇಶ ನೀಡಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಒಡಿಶಾದ ಜಲೇಶ್ವರ ಮೂಲದ 23 ವರ್ಷದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ದಾಳಿ ನಡೆಸಲಾಗಿತ್ತು. ಮೂವರು ವ್ಯಕ್ತಿಗಳು ಸಂತ್ರಸ್ತೆಯ ಬಳಿಗೆ ಬಂದು, ಆಕೆಯ ಫೋನ್ ಕಸಿದುಕೊಂಡು, ಹತ್ತಿರದ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಹಲ್ಲೆಯ ನಂತರ, ಆರೋಪಿಗಳು ಆಕೆಯ ಫೋನ್ ಹಿಂತಿರುಗಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳ ಬಂಧನವನ್ನು ಪಶ್ಚಿಮ ಬಂಗಾಳ ಪೊಲೀಸರು ದೃಢಪಡಿಸಿದ್ದಾರೆ ಮತ್ತು ಇನ್ನೂ ಇಬ್ಬರು ಶಂಕಿತರನ್ನು ಬಂಧಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

