ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಪಿ.ರಘುರವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಚಳ್ಳಕೆರೆ ಟೋಲ್‌ಗೇಟ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಸಹಸ್ರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಪಿ.ರಘುಗೆ ಬೆಂಬಲ ಸೂಚಿಸಿದರು.
ಡೊಳ್ಳು, ತಮಟೆ, ಉರುಮೆ, ಸೋಮನ ಕುಣಿತ, ಗೊಂಬೆ ಕುಣಿತ, ಕೀಲು ಕುದುರೆ, ಕಹಳೆ ಮೆರವಣಿಗೆಗೆ ಕಳೆ ಕಟ್ಟಿತ್ತು. ನಗರದೆಲ್ಲೆಡೆ ಬಾಳೆಕಂಬ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿದ್ದವು.
ಕಾಂಗ್ರೆಸ್ ಕಚೇರಿ ಮುಂಭಾಗ ಮೆರವಣಿಗೆ ಆಗಮಿಸುತ್ತಿದ್ದಂತೆ ಜೆಸಿಬಿ.ಯಿಂದ ಪಿ.ರಘು ಮತ್ತು ಕವಿತಾ ರಘು ಇವರುಗಳ ಮೇಲೆ ಹೂಮಳೆ ಸುರಿಸಿ ಬೃಹತ್ ಗಾತ್ರದ ಸೇಬಿನ ಹಾರ ಹಾಕಲಾಯಿತು.

