ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಬೇಕು. ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಸಿದರು. ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಚಿತ್ರದುರ್ಗ ಜಿಲ್ಲಾ ಸಂಚಾಲಕ ಕೃಷ್ಣ ಮಾತನಾಡಿ, ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಉದ್ಯೋಗ ಪಡೆಯಲು ಅವಿರತ ಅಧ್ಯಯನ, ಪರಿಶ್ರಮ ನಡೆಸಿದರೂ ಸಹ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಬೇಸತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡು ಸಿನಿಕತೆಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ೪೩ ಇಲಾಖೆಗಳಲ್ಲಿ ೨,೮೪,೮೮೧ ಹುದ್ದೆಗಳು ಖಾಲಿ ಬಿದ್ದಿವೆ. ನೇಮಕ ಮಾಡಲು ಕಿಂಚಿತ್ತೂ ಪ್ರಯತ್ನ ನಡೆಯುತ್ತಿಲ್ಲ. ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ೫೯,೪೫೪ ಹುದ್ದೆಗಳು ಖಾಲಿ ಬಿದ್ದಿವೆ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಕಡಿಕಾರಿದರು. ಕೆಇಎ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ದುಬಾರಿ ಅರ್ಜಿ ಶುಲ್ಕ ನಿಗದಿಪಡಿಸಿದ್ದು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಕ್ಕೊತ್ತಾಯಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖೇನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರವಿಕುಮಾರ್, ತಿಪ್ಪೇಸ್ವಾಮಿ, ಭವಾನಿ, ಕೊಟ್ರೇಶ್, ನಯನ, ರಘು, ಮಲ್ಲಿಕಾರ್ಜುನ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಹಕ್ಕೊತ್ತಾಯಗಳು:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ಭರ್ತಿಮಾಡಲು ಕ್ರಮ ಕೈಗೊಳ್ಳಿ.
ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಿ. ನೇಮಕಾತಿಗಳಿಗೆ ವಯೋಮಿತಿ ಕನಿಷ್ಟ ಐದು ವರ್ಷಗಳ ಸಡಿಲಿಕೆ ಮಾಡಿ.
ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈಬಿಟ್ಟು ಖಾಯಂ ಆಧಾರದಲ್ಲಿ ನೇಮಕಾತಿ ಮಾಡಿ. ಇತ್ತೀಚೆಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕ ಕೈಬಿಡಿ. ಖಾಲಿಯಿರುವ ಶಿಕ್ಷಕರ ಹುದ್ದೆ ಕೂಡಲೇ ಭರ್ತಿ ಮಾಡಿ.

