ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಅಲ್ಲದೆ ಮಾಲೂರು ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಸೂಚನೆ ನೀಡಿ ಆದೇಶಿಸಿದೆ.
ಮರು ಮತಗಳ ಎಣಿಕೆ ಮಾಡಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶವು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
ಕಳೆದ ಸೆಪ್ಟೆಂಬರ್ 16 ರಂದು ಶಾಸಕ ಕೆವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಅಲ್ಲದೆ, ಮೇಲ್ಮನವಿ ಸಲ್ಲಿಸುವವರೆಗೆ ಆದೇಶವನ್ನು ತಟಸ್ಥವಾಗಿ ಇರಿಸುವಂತೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ಅಸಿಂಧು ತೀರ್ಪಿಗೆ ತಡೆಯಾಜ್ಞೆ ನೀಡಿರುವುದರಿಂದ ನಂಜೇಗೌಡ ಶಾಸಕ ಸ್ಥಾನ ಅಬಾಧಿತವಾಗಿದೆ.
ಮಾಲೂರು ಶಾಸಕ ನಂಜೇಗೌಡ ಅವರು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾ. ಸೂರ್ಯಕಾಂತ್‌ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರ ಪೀಠ ವಿಚಾರಣೆ ನಡೆಸಿತು.
ಮರು ಮತ ಎಣಿಕೆ ನಂತರ, ನ್ಯಾಯಾಲಯದ ಅನುಮತಿಯಿಲ್ಲದೆ ಫಲಿತಾಂಶ ಘೋಷಿಸುವಂತಿಲ್ಲ. ಅಲ್ಲಿಯವರೆಗೆ, ನಂಜೇಗೌಡ ಅವರು ಶಾಸಕ ಸ್ಥಾನ ಅಬಾಧಿತ ಎಂದು ಕೋರ್ಟ್ ತಿಳಿಸಿದೆ.
ಶಾಸಕ ನಂಜೇಗೌಡ ಸಂತಸ-
ಶಾಸಕ ನಂಜೇಗೌಡ ಅವರು ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿ ನ್ಯಾಯ ಸಿಕ್ಕಿದೆ ಅಲ್ಲದೆ ಕೋರ್ಟ್ ಆದೇಶದಿಂದ ಸಂತೋಷ ಆಗುತ್ತಿದೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ನಂಜೇಗೌಡ ಅವರು, ಪ್ರತಿಸ್ಪರ್ಧಿ ಮಂಜುನಾಥ್ ಅವರು ಹೈಕೋರ್ಟ್ನಲ್ಲಿಕೇಸ್ ಹಾಕಿದಾಗ ಮರು ಮತ ಎಣಿಕೆಗೆ ನಾನು ಬೇಡ ಎನ್ನಲ್ಲ ಎಂದಿದ್ದೆ. ಮರು ಮತ ಎಣಿಕೆ ಜತೆಗೆ ಅಸಿಂಧು ಎಂದು ಆದೇಶವಾಗಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದೆ. ಅಸಿಂಧು ಎಂಬ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮರು ಮತ ಎಣಿಕೆ ಆದರೂ ನಾನು ಗೆಲ್ಲುತ್ತೇನೆ ಎಂದು ನಂಜೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಮಾಲೂರು ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಂಜುನಾಥ ಗೌಡ ಅವರು ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿ, ಅಸಿಂಧು ಆದೇಶಕ್ಕೆ ನಾಲ್ಕುವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮರು ಮತ ಎಣಿಕೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೇವಲ ಮಾರ್ಜಿನ್ ಬಗ್ಗೆ ಮಾತ್ರ ನಮಗೆ ಅನುಮಾನ ಇತ್ತು. ವಿಡಿಯೋಗ್ರಾಫ್ ಕೇಳಿದ್ದರೆ ಕೊಟ್ಟಿಲ್ಲ. ಆರ್ಒ ನಮ್ಮ ಅರ್ಜಿಯನ್ನು ಪೆಂಡಿಂಗ್ ಇಟ್ಟಿದ್ದರು. ನಮಗೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

