ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇದ್ದ ಘನತೆ, ಆಕರ್ಷಣೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳ ಉದ್ಯೋಗ ಸೃಷ್ಟಿಯ ಬೆಟ್ಟ ಕರಗುತ್ತಿದೆ, ಯುವ ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲೆಂದರಲ್ಲಿ ಗುಂಡಿ ಬಿದ್ದ ರಾಜಧಾನಿಯ ಪರಿಸ್ಥಿತಿಗೆ ‘ಅಂತರಾಷ್ಟ್ರೀಯ ಉದ್ಯಮಗಳು ಬೆಂಗಳೂರಿನಿಂದ ವಿಮುಖವಾಗುತ್ತಿವೆ‘.
ರಾಜ್ಯಕ್ಕೆ ಬರಬೇಕಿದ್ದ ಜಾಗತಿಕ ದಿಗ್ಗಜ Google ಸಂಸ್ಥೆಯ ಬರೋಬ್ಬರಿ 30,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವ 1.3 ಲಕ್ಷ ಕೋಟಿ ರೂ ಹೂಡಿಕೆ ನೆರೆ ರಾಜ್ಯ ಆಂಧ್ರ ಪ್ರದೇಶದ ಪಾಲಾಗಿದೆ ಎಂದು ಅವರು ಟೀಕಾಪ್ರಹಾರ ಮಾಡಿದ್ದಾರೆ.
ವಿಶ್ವದ ಜನರನ್ನು ಸೆಳೆಯುತ್ತಿದ್ದ ಬೆಂಗಳೂರನ್ನು ‘ಗುಂಡಿಗಳ ಬೆಂಗಳೂರು‘ ಎಂಬ ಅಪಖ್ಯಾತಿ ಅಂಟಿಸಿರುವ ಈ ಸರ್ಕಾರದ ನಡೆಯಿಂದಾಗಿ ಹಾಗೂ ಬೆಂಗಳೂರು ಉಸ್ತುವಾರಿ ಹೊತ್ತ ಡಿ.ಕೆ ಶಿವಕುಮಾರ ಅವರ ಇಚ್ಚಾಶಕ್ತಿ ಹಾಗೂ ವೈಫಲ್ಯದ ಕಾರಣದಿಂದಾಗಿ ಕನ್ನಡಿಗರಿಗೆ ಸಿಗಬೇಕಿದ್ದ ಸಾವಿರಾರು ಉದ್ಯೋಗಗಳು ನೆರೆ ರಾಜ್ಯದ ಪಾಲಾಗುತ್ತಿವೆ.
ಅಭಿವೃದ್ಧಿಯನ್ನು ಸಂಪೂರ್ಣ ಮರೆತ ಕಾಂಗ್ರೆಸ್ ಸರ್ಕಾರ ಕನಿಷ್ಠ ಬಂಡವಾಳ ಹೂಡುವ ಉದ್ಯಮ ಕ್ಷೇತ್ರವನ್ನೂ ಹಿಡಿದಿಟ್ಟುಕೊಳ್ಳುವ ಪ್ರಾಮಾಣಿಕ ಕಾಳಜಿಯ ಪ್ರತೀಕವಾಗಿ, ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸುವಲ್ಲಿಯೂ ವಿಫಲವಾಗಿರುವುದು ಕರ್ನಾಟಕ ರಾಜ್ಯದ ದುರಂತವೇ ಸರಿ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

