ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರ ಮಧ್ಯ ಭಾಗದಲ್ಲಿರುವ ದಿವಂತ ಆರ್.ಎಲ್.ಜಾಲಪ್ಪ ಅವರ ಕನಸಿನ ಕೂಸಾದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ವೇದಿಕೆಯ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೊಡ್ಡಬಳ್ಳಾಪುರಕ್ಕೆ ಜಾಲಪ್ಪರವರ ಕೊಡುಗೆ ಅಪಾರ, ಹಾಗೆಯೇ ಜಾಲಪ್ಪರವರ ಹೆಸರು ಅಜರಾಮರ. ದಿನಾಂಕ 19-10-2025, ಭಾನುವಾರದಂದು ನಡೆಯಲಿರುವ ಜಾಲಪ್ಪರವರ ‘ಜನ್ಮ ಶತಮಾನೋತ್ಸವ‘ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ದೊಡ್ಡಬಳ್ಳಾಪುರದ ಜನತೆಯ ಪರವಾಗಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಆದರದಿಂದ ಸ್ವಾಗತವನ್ನು ಕೋರುತ್ತದೆ ಎಂದರು.
ದೊಡ್ಡಬಳ್ಳಾಪುರ ಹೃದಯ ಭಾಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣ ಮಾಜಿ ಸಚಿವ ದಿವಂಗತ ಆರ್‌ಎಲ್ ಜಾಲಪ್ಪರವರ ಕನಸಿನ ಕೂಸು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಜಾಲಪ್ಪನವರ ದೂರದೃಷ್ಟಿಯಿಂದ ನಿರ್ಮಿಸಿದ್ದ ಈ ಬಸ್ ನಿಲ್ದಾಣ ಇಂದು ಶಿಥಿಲಗೊಂಡಿದೆ. ಬಸ್ ನಿಲ್ದಾಣದ ಜಾಗದಲ್ಲಿ ಬಸ್ ಡಿಪೋ ಸಹ ಇದೆ.
ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಎರಡೂ ಇರುವ ಈ ಸ್ಥಳ, ನಗರದ ಎರಡು ಪ್ರಮುಖ ರಸ್ತೆಗಳ ಮಧ್ಯಭಾಗದಲ್ಲಿದೆ. ಡಿಪೋ ಚಟುವಟಿಕೆಗಳನ್ನು ಹೊರತುಪಡಿಸಿ, ಬಸ್‌ನಿಲ್ದಾಣದ ಭಾಗದಲ್ಲಿ ಯಾವುದೇ ಸಕ್ರಿಯ ಸಂಚಾರ ನಡೆಯುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಮಾದರಿ ಬಸ್ ನಿಲ್ದಾಣವಾಗಬೇಕೆಂದು ನಿರ್ಮಿಸಿದ್ದ ನಿಲ್ದಾಣ ಇಂದು ಹೆಸರಿಗಷ್ಟೇ ಹೊಸ ಬಸ್ ನಿಲ್ದಾಣವಾಗಿ ಉಳಿಯುವುದರ ಜೊತೆಗೆ ನಾಗರೀಕರಿಂದ ಜಾಲಪ್ಪನವರ ಕನಸಿನ ಬಸ್ ನಿಲ್ದಾಣ ಕಣ್ಮರೆಯಾಗುತ್ತಿದೆ.
ಇನ್ನೊಂದು ಕಡೆ ಹಳೆ ಬಸ್ ನಿಲ್ದಾಣದ ಪ್ರದೇಶ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ, ಎರಡೂ ಬಸ್ಸುಗಳ ಸಂಚಾರಕ್ಕೆ ಕೇಂದ್ರವಾಗಿದೆ ಹಾಗೂ ಅಲ್ಲಿಯೇ ಇರುವ ಮಾರುಕಟ್ಟೆಯು ಜನಸಂದಣಿಯ ಹೆಚ್ಚುವರಿಗೆ ಪ್ರಮುಖ ಕಾರಣ ಎಂದರೆ ತಪ್ಪಲ್ಲ. ಈ ಜನದಟ್ಟಣೆಯಿಂದ ಬಸ್ಸುಗಳ ಸಂಚಾರ ಕೂಡ ಆ ಪ್ರದೇಶದ ರಸ್ತೆಗಳಲ್ಲಿ ಕಷ್ಟಕರವಾಗಿ ಉಳಿದುಬಿಟ್ಟಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಜಾಲಪ್ಪನವರ ಆಶಯದಂತೆ ನಿರ್ಮಾಣವಾಗಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ಪಟ್ಟಭದ್ರ ಹಿತಾಸಕ್ತಿಗಳು ಪೆಟ್ರೋಲ್ ಬಂಕ್ ತೆರಯಲು ಹೊರಟಿವೆ ಎಂದ ಅವರು, ಈ ಬಸ್ ನಿಲ್ದಾಣದ ಬಳಿ ತಾಲ್ಲೂಕು ವ್ಯವಸಾಯೋತ್ಫನ್ನ ಸಹಕಾರ ಸಂಘದ ಜೊತೆಗೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಅಕ್ಕಿ ದಾಸ್ತಾನು ಗೋದಾಮು ಮತ್ತು ನಗರಸಭೆ ಕಚೇರಿಯ ಕಟ್ಟಡವಿದೆ. ಮತ್ತೊಂದೆಡೆ ಸರ್ಕಾರಿ ಪ್ರೌಢಶಾಲೆ ಮತ್ತು ಮಹಿಳಾ ಕಾಲೇಜಿದೆ.
ಮತ್ತೊಂದು ಬದಿಯಲ್ಲಿ ತೋಟಗಾರಿಕಾ ಇಲಾಖೆ ಇದೆ ಜೊತೆಗೆ ಒಂದು ಬ್ಯಾಂಕ್ ಸಹ ಬರುತ್ತಿದೆ. ಇಷ್ಟೆಲ್ಲಾ ಇದ್ದರೂ ಇಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಅನುಮತಿ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿರುವುದು ದುರದೃಷ್ಟಕರ ಎಂದರು.
ದಿನದಿಂದ ದಿನಕ್ಕೆ ಈ ನಮ್ಮ ನಗರವು ಅತಿವೇಗದಲ್ಲಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ಕ್ವಿನ್ ಸಿಟಿ ಅಂತಹ ಯೋಜನೆಗಳು ನಮ್ಮ ನಗರದ ಮೌಲ್ಯವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ನಗರದ ಮಧ್ಯ ಭಾಗದಲ್ಲಿರುವ ಈ ಹೊಸ ಬಸ್ ನಿಲ್ದಾಣವನ್ನು ನಮ್ಮ ಬಳಕೆಗೆ ಬರುವಂತೆ ಯೋಚಿಸಿ, ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ.
ಸಂಚಾರ ದಟ್ಟಣೆಯು ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಧ್ಯಭಾಗದಲ್ಲಿರುವ ಡಿಪೋವನ್ನು ಹೊರವಲಯಕ್ಕೆ ಸ್ಥಳಾಂತರಿಸಿ, ಇರುವ ಜಾಗದ ಸಂಪೂರ್ಣ ಉಪಯೋಗವನ್ನು ಬಸ್ ನಿಲ್ದಾಣದ ಉದ್ದೇಶಕ್ಕಾಗಿ ಬಳಸಿಕೊಂಡು, ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. ಬಸ್ ನಿಲ್ದಾಣವನ್ನಾಗಿಸಿಕೊಂಡು ಜನಸಾಮಾನ್ಯರಿಗೆ ಸಹಾಯ ಮಾಡುವುದು ಅಷ್ಟೇ ಅಲ್ಲದೆ, ಮುಖ್ಯವಾಗಿ ಜಾಲಪ್ಪರವರ ಕನಸಿನ ಕೂಸಿಗೆ ಮತ್ತೆ ಜೀವವನ್ನು ತುಂಬುವ ಕೆಲಸವಾಗಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯು ವಿಶ್ವಾಸಿಸುತ್ತದೆ.
ಮುಖ್ಯಮಂತ್ರಿಗಳು ಈ ವಿಚಾರವನ್ನು ಕಾರ್ಯರೂಪಕ್ಕೆ ತಂದರೆ ಜಾಲಪ್ಪರವರ ಕನಸ್ಸನ್ನು ನನಸು ಮಾಡುವ ಫಲದ ಜೊತೆಗೆ ಜಾಲಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಂದ ನೆನಪು ದೊಡ್ಡಬಳ್ಳಾಪುರದ ಜನತೆಯ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ ಎಂದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಾಲಪ್ಪರವರ ‘ಜನ್ಮ ಶತಮಾನೋತ್ಸವ‘ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಬೇಕೆಂಬ ಉದ್ದೇಶದಿಂದ, ಆರಕ್ಷಕ ನಿರೀಕ್ಷಕರಿಗೆ ಮುಖ್ಯಮಂತ್ರಿಗಳ ಭೇಟಿಗಾಗಿ ಅನುಮತಿಯನ್ನು ಪಡೆಯಲು ವೇದಿಕೆಯು ಮನವಿ ಸಲ್ಲಿಸಿದೆ. ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ, ಹಾಗೂ ಮಾನ್ಯ ಧೀರಜ್ ಮುನಿರಾಜು ರವರಿಗೂ ಮನವಿ ಪತ್ರವನ್ನು ಸಲ್ಲಿಸಲಿದ್ದೇವೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಬಯಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಮುಖಂಡ ಪಿ ವಾಸು, ನರೇಂದ್ರ, ಅರವಿಂದಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಪ್ರದೀಪ್, ತಾಲ್ಲೂಕು ಕಾರ್ಮಿಕ ಘಟಕ ಶಿವ ಶಂಕರ್ ರೆಡ್ಡಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ಮಹಿಳಾ ಜಿಲ್ಲಾಧ್ಯಕ್ಷ ರಾಧಾ ಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇ ಗೌಡ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ತಾಲ್ಲೂಕು ಮುಖಂಡರಾದ ಸಂದೀಪ್ ಕುಮಾರ್, ಮಹಿಳಾ ಮುಖಂಡ ಗಿರಿಜಮ್ಮ, ಮಮ್ತಾಜ್, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

