ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ‘ವಿಶ್ವ ಆಹಾರ ದಿನಾಚರಣೆ‘ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ವಿಶ್ವ ಆಹಾರ ದಿನಾಚರಣೆ‘ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರೊಂದಿಗೆ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಕೃತಿ ನಿಯಮದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಗಾಳಿ, ಸೂರ್ಯ, ನೀರು ಜೊತೆಗೆ ಆಹಾರ ಇಲ್ಲದೇ ನಾವು ಜೀವಿಸಲು ಸಾಧ್ಯವಿಲ್ಲ. ಹಸಿದವರಿಗೆ ಮಾತ್ರ ಗೊತ್ತು ಅನ್ನದ ಬೆಲೆ. ಇಂದು ವಿಶ್ವ ಆಹಾರ ದಿನ ಆಚರಿಸುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ಜವಾಹರ್‌ಲಾಲ್ ನೆಹರು ಅವರ ಕಾಲದಿಂದಲೂ ಆಹಾರ ವಿತರಿಸುವ ವ್ಯವಸ್ಥೆ ಪ್ರಾರಂಭವಾಯಿತು. ಇಂದಿರಾ ಗಾಂಧಿ ಅವರು ಉಳುವವನಿಗೆ ಭೂಮಿ ಕೊಟ್ಟರು. ದೇವರಾಜ ಅರಸು ಅವರ ಕಾಲದಲ್ಲಿ ರೈತರಿಗೆ ಶಕ್ತಿಯನ್ನು ಕೊಡಬೇಕೆಂದು ಪಡಿತರ ಚೀಟಿ ವ್ಯವಸ್ಥೆಯನ್ನು ಇಂದಿರಾಗಾಂಧಿ ಅವರು ಪರಿಚಯಿಸಿದರು ಎಂದು ಡಿಕೆ ಶಿವಕುಮಾರ್ ಸ್ಮರಿಸಿದರು.
ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅನ್ನಭಾಗ್ಯ ಕಾರ್ಯಕ್ರಮ‘ ಘೋಷಣೆ ಮಾಡಿದರು. ಎಸ್‌ಎಂ ಕೃಷ್ಣ ಅವರ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಸರ್ಕಾರದಿಂದಲೇ ಬಿಸಿಯೂಟ ಕಾರ್ಯಕ್ರಮ ರೂಪಿಸಿದರು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ, ಇನ್ನು 5 ಕೆಜಿ ಇಂದಿರಾ ಕಿಟ್ನಲ್ಲಿ 1 ಕೆ.ಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಹಾಗೂ 1 ಕೆ.ಜಿ ಉಪ್ಪು ವಿತರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಜನರ ಆದಾಯ ಪಾತಾಳಕ್ಕೆ ಹೋಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿತ್ತು. ಇದಕ್ಕೆ ಪರಿಹಾರ ಒದಗಿಸಲು ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ನಮ್ಮ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ನುಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ.
ಗ್ಯಾರಂಟಿಗಳನ್ನು ಟೀಕಿಸಿದವರೇ ಇದೀಗ ಬೇರೆ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಮಾದರಿಯನ್ನು ಇಡೀ ದೇಶ ಪಾಲಿಸುತ್ತಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 75 ವರ್ಷ ಮೇಲ್ಪಟ್ಟ ಅಂತ್ಯೋದಯ ಅನ್ನ ಯೋಜನೆ / ಬಿಪಿಎಲ್‌ಪಡಿತರದಾರರಿಗೆ ‘ಅನ್ನ ಸುವಿಧಾ ಯೋಜನೆ‘ ವಿಸ್ತರಿಸಲಾಯಿತು. ಹಿರಿಯ ವಯೋವೃದ್ಧರ ಮನೆ ಬಾಗಿಲಿಗೆ ಅನ್ನ ಸುವಿಧಾ ಯೋಜನೆಯಡಿ ನಿಮ್ಮ ಪಡಿತರ ನಿಮ್ಮ ಬಾಗಿಲಿಗೆ ಬರಲಿದೆ. ಇಂದೇ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

