ಕಡಿಮೆ ಬಡ್ಡಿ ಮತ್ತು ಶೂನ್ಯ ಬಡ್ಡಿಯ ಸಾಲ ಸೌಲಭ್ಯ ರೈತರು ಪಡೆಯಲಿ

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಸರ್ಕಾರದ ಸಹಕಾರ ಇಲಾಖೆ ಮುಂದಾಗಿದ್ದು, ಹಲವು ಸೇವೆಗಳನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜನರಿಗೆ ತಲುಪಿಸಲು ಯೋಜನೆಗಳನ್ನು ರೂಪಿಸಿದೆ ಎಂದು ಡಿಸಿಸಿ ಬ್ಯಾಂಕ್‌ಪ್ರತಿನಿಧಿ ಟಿ.ವಿನಯ್‌ಯಾದವ್‌ತಿಳಿಸಿದರು.

ತಾಲೂಕಿನ ದೊಡ್ಡಕಿಟ್ಟದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರದಲ್ಲಿ ಸಹಕಾರ ಇಲಾಖೆ ಪ್ರಾರಂಭವಾದ ನಂತರ ಸಾಕಷ್ಟು ಅನುದಾನ ಹಾಗೂ ಹೊಸ ಯೋಜನೆಗಳು ಪ್ರಾರಂಭವಾಗಿವೆ ಎಂದರು.

- Advertisement - 

ಈಗಾಗಲೇ ಸಹಕಾರ ಸಂಘಗಳ ಗಣಕೀಕರಣ ಮಾಡಲಾಗಿದೆ. ಇಲ್ಲಿಂದಲೇ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವುದು, ಬೀಜೋತ್ಪಾಧನಾ ಕೇಂದ್ರ ತೆರೆದು, ಈ ಭಾಗದ ತಳಿಗಳನ್ನು ಸ್ಥಾಪನೆ ಮಾಡಲು ಅವಕಾಶಗಳಿವೆ ಎಂದರು.

ಬ್ಯಾಂಕ್ ಮಿತ್ರ ಯೋಜನೆ ಅಡಿ ಬಯೊಮೆಟ್ರಿಕ್ ಬಳಸಿ ಬ್ಯಾಂಕ್ ಕೆಲಸವನ್ನು ಸಹಕಾರ ಸಂಘಗಳ‌ಮೂಲಕ ಜನರಿಗೆ ತಲುಪಿಸುವ ಮೂಲಕ ಆರ್ಥಿಕವಾಗಿ ಮುನ್ನಡೆಯಬಹುದಾಗಿದೆ. ಆಹಾರ ಭದ್ರತಾ ಯೋಜನೆಯಡಿ ಬೃಹತ್ ಗೋದಾಮು ಕಟ್ಟಿಸಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ರೈತರ ಉತ್ಪನ್ನಗಳನ್ನು ಶೇಖರಣೆ ಮಾಡುವ ಮೂಲಕವೂ ಆದಾಯ ತರಬಹುದು. ಸರ್ಕಾರದ ಸೇವೆಗಳನ್ನು ಜನರಿಗೆ ನೇರವಾಗಿ ತಲುಪಿಸುವ ಸಿಎಸ್‌ಸಿ ಕೇಂದ್ರ, ಜನೌಷಧ ಕೇಂದ್ರ ತೆರೆಯಲು ಅವಕಾಶವಿದೆ ಎಂದು ವಿವರಿಸಿದರು.

- Advertisement - 

ಸೊಸೈಟಿ ಅಡಿ FPO ಮಾಡಿಕೊಂಡರೆ ಕೇಂದ್ರದಿಂದ ಅನುದಾನ‌ಸಿಗಲಿದೆ. ಗ್ಯಾಸ್ ರೀಫಿಲ್ಲಿಂಗ್ ಕೇಂದ್ರ ಹಾಗು ಪೆಟ್ರೊಲ್ ಬಂಕ್ ತೆರೆಯಲು ಅವಕಾಶವಿದೆ. ಸಹಕಾರ ಸಂಘಗಳ ಆಡಳಿತ ಮಂಡಳಿ ಆಲೋಚನೆ ಮಾಡಿ ಇಂತಹ ಯೋಜನೆಗಳನ್ನು ಬಳಕೆ ಮಾಡಿಕೊಂಡು ಉತ್ತಮವಾಗಿ ಬೆಳೆಯಬಹುದು. ಜೊತೆ ಜೊತೆಗೆ ಜನರಿಗೆ ಸೇವೆಗಳನ್ನು ಒದಗಿಸಬಹುದು ಎಂದರು.ಡಿಸಿಸಿ ಬ್ಯಾಂಕ್‌ಮಾಡದಕೆರೆ ಶಾಖೆ ವ್ಯವಸ್ಥಾಪಕ ನರಸಿಂಹರಾಜು ಮಾತನಾಡಿ, ಸಹಕಾರಿ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರೆಯಲಿದ್ದು, ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಲಹೆ ನೀಡಿದರು.

ಡಿ.ಕೆ.ಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್‌.ರುದ್ರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸಹಕಾರ ಸಂಘಗಳು ಜನರಿಗೆ ನೇರವಾಗಿ ಸಂಪರ್ಕ ಹೊಂದಿವೆ. ಈ ಮೂಲಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ರೈತರು ಹೆಚ್ಚು ಸಂಪರ್ಕದಲ್ಲಿದ್ದು, ಸಾಲ ಮರುಪಾವತಿ ಮಾಡುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರ ರೈತರಿಗೆ ನೀಡುವ ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಡಿ.ಕೆ.ಹಳ್ಳಿ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್ ಕೆಂಕೆರೆ, ಗೌಡಪ್ಪ, ನಾಕೀಕೆರೆ ತಿಪ್ಪೇಸ್ವಾಮಿ, ಸಿಇಓ ರಂಗಸ್ವಾಮಿ, ಸಿಬ್ಬಂದಿ ಮಧು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.

 

Share This Article
error: Content is protected !!
";