ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಒಂದು ತಿಂಗಳು ಕಾಯುತ್ತೇವೆ. ಆ ಮೇಲೆ ಕೆಲಸ ನಿಲ್ಲಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಚಾಮರಾಜಪೇಟೆ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗುತ್ತಿಗೆದಾರರು ಯಾರು ಕೋರ್ಟ್ಗೆ ಹೋಗಲ್ಲ, ಕೆಲಸ ನಿಲ್ಲಿಸುತ್ತೇವೆ. ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ. ಗುತ್ತಿಗೆದಾರರು ಬಹಳಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಹಳ ಭರವಸೆ ಇಟ್ಟಿದ್ದೆವು. ಅವರನ್ನು ಐದಾರು ಬಾರಿ ಭೇಟಿ ಮಾಡಿದ್ದೇವೆ. ಒಬ್ಬೊಬ್ಬ ಸಚಿವರನ್ನು ಭೇಟಿ ಮಾಡಿದ್ದೇವೆ.
ಪಿಡಬ್ಲ್ಯೂಡಿ ಇಲಾಖೆಯಲ್ಲಿ 9 ಸಾವಿರ ಕೋಟಿ ರೂ. ಬಾಕಿಯಿದೆ. ಪಿಡಬ್ಲ್ಯೂಡಿ ಇಲಾಖೆ ಜ್ಯೇಷ್ಠತೆ ಪಾಲಿಸುತ್ತಿದೆ. ಹಿರಿತನದ ಆಧಾರಿತವಾಗಿ ಹಣ ಕೊಡುತ್ತಿದ್ದಾರೆ. ಉಳಿದ ಇಲಾಖೆಗಳಲ್ಲಿ ಈ ನಿಯಮ ಆಗುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಸರ್ಕಾರದಿಂದ ಒಟ್ಟು 33 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿದಿದೆ ಎಂದು ಮಂಜುನಾಥ್ ಆರೋಪಿಸಿದರು.
ಕಳೆದ ಎರಡೂವರೆ ವರ್ಷಗಳಿಂದ ಬಿಲ್ ಬಾಕಿ ಉಳಿದಿದ್ದು ಸಿಎಂ, ಸಚಿವರ ಗಮನಕ್ಕೆ ತರಲಾಗಿದೆ. ಪಿಡಬ್ಲ್ಯೂಡಿ ಬಿಟ್ಟು ಬೇರೆ ಇಲಾಖೆಗಳಿಂದ ಬಾಕಿ ರಿಲೀಸ್ ಆಗುತ್ತಿಲ್ಲ. ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಿಯಾಂಕ್ ಖರ್ಗೆ ಹಣ ಬಿಡುಗಡೆಗೆ ಒಪ್ಪಿಕೊಂಡು ಹಂತ, ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದಾರೆ. 501 ಕೋಟಿ ರೂ. ಬಿಲ್ ಕ್ಲಿಯರ್ ಮಾಡಬೇಕು. ಸಣ್ಣ ನೀರಾವರಿ ಇಲಾಖೆಯಲ್ಲಿ ಸಮಸ್ಯೆ ಹೆಚ್ಚಿವೆ ಎಂದು ಅವರು ಆರೋಪಿಸಿದರು.
ಗುತ್ತಿಗೆದಾರರು ಸಾಲಗಾರರ ಕಾಟಕ್ಕೆ ಪೋನ್ ಸ್ವಿಚ್ಡ್ ಆಫ್ ಮಾಡುವ ಪರಿಸ್ಥಿತಿ ಬಂದಿದೆ. ಮುಖ್ಯಮಂತ್ರಿಗಳು ಎರಡು ಬಾರಿ ಸಭೆ ಕರೆದು, ಬಳಿಕ ಸಭೆ ರದ್ದು ಮಾಡಿದರು. ಯಾಕೆ ರದ್ದು ಮಾಡಿದ್ದಾರೆಂದು ಗೊತ್ತಿಲ್ಲ. ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದೇವೆ. ಮಾಡೋಣ, ಮಾಡೋಣ ಅಂತ ಹೇಳುತ್ತಾರೆ. ಬಾಲರಾಜು ಎಂಬನಿವೃತ್ತ ಅಧಿಕಾರಿ ಇಟ್ಟುಕೊಂಡಿದ್ದಾರೆ. ಬಾಲರಾಜು ಮೇಲೆ ಲೋಕಾಯುಕ್ತ ಕೇಸ್ ಇವೆ. ಅವರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ. ಬಾಲರಾಜು ಅವರನ್ನು ತೆಗೆಯುತ್ತೇವೆ ಅಂದರು, ಆದರೆ ಇನ್ನೂ ಅವರನ್ನು ತೆಗೆದಿಲ್ಲ ಎಂದು ಆರ್.ಮಂಜುನಾಥ್ ಆರೋಪಿಸಿದರು.
ಬೇಕಾದವರಿಗೆ ಟೆಂಡರ್:
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಹೊರರಾಜ್ಯದ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಹಲವು ಬದಲಾವಣೆ ಮಾಡಲಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲ ಮಾಡಲಾಗುತ್ತಿದೆ. ಪ್ಯಾಕೇಜ್ ಟೆಂಡರ್ ಮಾಡುತ್ತಿದ್ದಾರೆ. 784 ಕೋಟಿ ರೂ. ಮೊತ್ತದ ಟೆಂಡರ್ ಕರೆದಿದ್ದಾರೆ. 4 ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಸ್ಥಳೀಯ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ದೂರಿದರು.
ಕಾರ್ಮಿಕ ಇಲಾಖೆಯಲ್ಲಿ ಕರೆಯಲಾಗಿರುವ ಗುತ್ತಿಗೆ ರದ್ದು ಮಾಡಿ 8, 9 ಜಿಲ್ಲೆಗಳನ್ನು ಒಟ್ಟಿಗೆ ಸೇರಿಸಿ ಪ್ಯಾಕೇಜ್ ಮಾಡಬೇಕು. ಪ್ಯಾಕೇಜ್ ಸಿಸ್ಟಮ್ ಮಾಡಿ ಹಿಂದಿನ ಸರ್ಕಾರ ಹಾಳಾಯ್ತು. ಇವರು ಹಾಗೆ ಮಾಡಿದರೆ ಕಷ್ಟ ಅನುಭವಿಸುತ್ತಾರೆ. ದೀಪಾವಳಿ ಆದ ಮೇಲೆ ಸಭೆ ಅಂತ ಸಿಎಂ ಹೇಳಿದ್ದರು. ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಕಮಿಷನ್ ದುಪ್ಪಟ್ಟು:
ರಾಜ್ಯ ಸರ್ಕಾರದಲ್ಲಿ ಲಂಚ ಮತ್ತು ಕಮಿಷನ್ ಇಲ್ಲ ಎಂದು ಹೇಳುವುದಿಲ್ಲ. ಅದೇನು ಅಂತ ಡಿಸೆಂಬರ್ನಲ್ಲಿ ಹೇಳುತ್ತೇವೆ. ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟಾಗಿದೆ. ಶೇ 40, 60%, 80% ಕಮಿಷನ್ ಅಂತ ನಾನು ಹೇಳಿಲ್ಲ. ಗುತ್ತಿಗೆದಾರರು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾರೆ. ದಯವಿಟ್ಟು ಹಣ ಕೊಡಿಸಿ ಎಂದು ಕಾಲ್ ಮಾಡುತ್ತಾರೆ. ಕಾಮಗಾರಿ ಮಾಡುವುದಕ್ಕೆ ನೂರಾರು ದಾರಿಗಳಿವೆ. ಶೇ 90ರಷ್ಟು ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡುತ್ತೇವೆ ಎಂದು ಮಂಜುನಾಥ್ ತಿಳಿಸಿದರು.
ರಾಜ್ಯಪಾಲರಿಗೆ ದೂರು: ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿಲ್ಲ ಅಂದರೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಅಲ್ಲದೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರಿಗೂ ದೂರು ನೀಡುತ್ತೇವೆ ಎಂದು ಆರ್.ಮಂಜುನಾಥ್ ಎಚ್ಚರಿಸಿದರು.
ಶೇ10, ಶೇ20ರಷ್ಟು ಕಮಿಷನ್:
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಕಮಿಷನ್ ಕೊಡಬೇಕು. ಒಳ್ಳೆಯ ಶಾಸಕರು ಇದ್ದರೆ 10% ಕಮಿಷನ್ ಕೊಡಬೇಕು. ಬೇರೆ ಶಾಸಕರಿಗೆ 20% ಕಮಿಷನ್ ಕೊಡಬೇಕು ಎಂದು ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಬಿ.ಶೇಗಜಿ ಗಂಭೀರ ಆರೋಪ ಮಾಡಿದರು.

