ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಆಗ್ರಹಿಸಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯತ್ನಾಳ್ ಅವರು ಬರೆದಿರುವ ಪತ್ರ ಈಗ ವೈರಲ್ ಆಗಿದ್ದು ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದು ಎಂದು ಯತ್ನಾಳ್ ಆಗ್ರಹ ಮಾಡಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆ ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬೆನ್ನಲ್ಲೇ, ಯತ್ನಾಳ್ ಸಿಎಂಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು ಎಂದು ಅವರು ಆಗ್ರಹ ಮಾಡಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಯತ್ನಾಳ್ ಪತ್ರದ ಸಾರಾಂಶ:
ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲಾ ಮೈದಾನಗಳನ್ನು ಖಾಸಗಿ ಸಂಘ, ಸಂಸ್ಥೆಗಳ ಬಳಸುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದ ಹಿನ್ನೆಲೆ, ಅದೇ ನೀತಿ ಮತ್ತು ನ್ಯಾಯೋಚಿತ ನಿಲುವನ್ನು ಸಮಾಜದ ಎಲ್ಲಾ ವರ್ಗಗಳಿಗೂ ಸರಿಸಮಾನವಾಗಿ ಅನ್ವಯಿಸುವ ಅಗತ್ಯತೆ ಇದೆ.
ಸರ್ಕಾರಿ ಸ್ಥಳ, ಸಾರ್ವಜನಿಕ ರಸ್ತೆಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಸರಿಯಾಗಿ ಅನುಮತಿ ಪಡೆಯದೇ ಜನರು ನಮಾಜ್ ಮಾಡುವುದನ್ನು ನೋಡಿದ್ದೇವೆ.ಅದರಿಂದ ವಾಹನ ಸಂಚಾರ, ಜನರ ಓಡಾಟಕ್ಕೆ ಅಡಚಣೆಯಾಗಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಯತ್ನಾಳ್ ಸಮಸ್ಯೆಗಳನ್ನು ವಿವರಿಸಿದ್ದಾರೆ.
ಸಂವಿಧಾನದ ಆರ್ಟಿಕಲ್ 19, 21ರಡಿ ಮೂಲಕ ಖಾತ್ರಿಪಡಿಸಲಾದ ಮುಕ್ತ ಓಡಾಟದ ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತಿದೆ. ಸರ್ಕಾರಿ ಸ್ಥಳಗಳಲ್ಲಿ ಅಥವಾ ಯಾವುದೇ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ ಮಾಡಲು ವಿಶೇಷ ಅವಕಾಶ ಇರಬಾರದು. ಇತರ ಸಂಘ, ಸಂಸ್ಥೆಗಳಿಗೆ ನಿರ್ಬಂಧ ಹೇರಿ ನಮಾಜ್ನಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಬಸನಗೌಡ ಯತ್ನಾಳ್ ಎಚ್ಚರಿಸಿದ್ದಾರೆ.
ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗ ಅಥವಾ ಸರ್ಕಾರಿ ಸ್ಥಳಗಳಲ್ಲಿ ಪೂರ್ವಾನುಮತಿ ಇಲ್ಲದೇ ನಮಾಜ್ ಮಾಡಲು ಅವಕಾಶ ನೀಡದಂತೆ ಎಲ್ಲಾ ಡಿಸಿ, ಪೊಲೀಸ್ ಆಯುಕ್ತರಿಗೆ ಸಮರ್ಪಕ ನಿರ್ದೇಶನ ನೀಡುವಂತೆ ಯತ್ನಾಳ್ ಕೋರಿದ್ದಾರೆ.
ಸರ್ಕಾರ ಈ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸುತ್ತೋಲೆ ಹೊರಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಕ್ಕಾಗಿ ಅನಧಿಕೃತವಾಗಿ ಬಳಸುವುದಕ್ಕೆ ಸೂಕ್ತ ಸಂಚಾರ ನಿರ್ಬಂಧಗಳನ್ನು ಹೇರಿ ಶಿಕ್ಷೆಗೆ ಒಳಪಡಿಸುವಂತೆ ಯತ್ನಾಳ್ ಕೋರಿದ್ದಾರೆ.
ಈ ನಿಯಮಗಳ ಸಮಾನ ಜಾರಿಯಿಂದ ಕಾನೂನು ಮುಂದೆ ಜಾತ್ಯತೀತತೆ, ಸಮಾನತೆಯ ರಾಜ್ಯದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕಾನೂನು ಸುವ್ಯವಸ್ಥೆ, ಶಿಸ್ತು, ಧಾರ್ಮಿಕ ಒಳಗೊಳ್ಳುವಿಕೆ ಕಾಪಾಡಲು ಹಾಗೂ ಸಂಚಾರ ಅಡಚಣೆ ತಪ್ಪಿಸಲು ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದಕ್ಕೆ ನಿಷೇಧಿಸುವಂತೆ ಯತ್ನಾಳ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

