ಅವ್ವ ಇದ್ದಾಳೆ!

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅವ್ವ ಇದ್ದಾಳೆ!…
ಇದು ಐದು ವರ್ಷಗಳ ಹಿಂದಿನ ಮಾತು. ಅಕ್ಟೋಬರ್
18, 2020ರಂದು ನನ್ನ ಹಿರಿಯ ಸುಪುತ್ರ ವಿನಯನಿಗೆ ತಮ್ಮನಾಗಿ ವಿವೇಕ ಜತೆಯಾದ ದಿನ. ವಿಷಯ ತಿಳಿಸಲೆಂದು ಊರಿಗೆ ಕರೆ ಮಾಡಿದವನಿಗೆ ಮಾತೇ ಹೊರಡಲಿಲ್ಲ. ಅಳು ಅಳು… ತಡೆಯಲಾಗುತ್ತಿಲ್ಲ; ಅಕ್ಷರಶಃ ಬಿಕ್ಕಿ ಬಿಕ್ಕಿ ಅತ್ತೆನು. ಹರಕೆಗಳು ವಿಫಲವಾಗಿದ್ದವು; ಅವ್ವ ಹುಟ್ಟಿ ಬರಲಿಲ್ಲವಲ್ಲ ಎಂಬ ಕೊರಗು ಬಹುವಾಗಿ ಕಾಡಿತು. ನನ್ನ ಸೋದರತ್ತೆ, ಅಕ್ಕಂದಿರು, ಅಣ್ಣಂದಿರು ಸಾವಧಾನದಿಂದ ಸಮಾಧಾನಿಸಿದರು.

ದೈವಗುಣದ ಅವ್ವಗೆ ಮರುಜನ್ಮ ಎಂಬುದೇ ಇಲ್ಲ, ಮುಕ್ತಿ ದಕ್ಕಿದೆ; ಕಳೆದ ಜನ್ಮದಿ ಹೆಣ್ಣಾಗಿ ಕಹಿ ಉಂಡ ಜೀವಾತ್ಮ ಈ ಜನ್ಮದಲಿ ಗಂಡು ಮಗುವಿನ ರೂಪ ಪಡೆದಿದೆ. ಗಂಡು ಮಕ್ಕಳ ಮೇಲೆ ಬಲು ಪ್ರೀತಿ, ಕಾಳಜಿ ಇತ್ತಲ್ಲ. ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ತಡರಾತ್ರಿ ಮನೆಗೆ ಬಂದರೂ ತಾನೇ ಎದ್ದು ಊಟಕ್ಕೆ ಕೊಡುತ್ತಿದ್ದಳು. ಗೆಣಸು, ಕರ್ಜೂರ, ಉತ್ತುತ್ತಿ, ಹೋಳಿಗೆ, ಹೂರಣ ನೆಲವಂಟಿಗೆಯಲ್ಲಿ ತೆಗೆದಿಟ್ಟು ಕೊಡುತ್ತಿದ್ದಳಲ್ಲ ಬಸು. ಅವ್ವ ಗಂಡು ಮಗುವಾಗಿ ಜನಸಿದ್ದಾಳೆ ಬಿಡಪ್ಪ; ಒಳಿತಾಗುತ್ತದೆ‘. ಹೀಗೆ ಒಬ್ಬೊಬ್ಬರು ಒಂದೊಂದು ವಿಚಾರ ಹೇಳಿ ಸಮಾಧಾನಿಸಿದ್ದರು.

- Advertisement - 

ಗಂಟೆಕಾಲ ಫೋನ್ ಕಾಲ್ ನಲ್ಲಿ ಮುಳುಗಿದ್ದವನಿಗೆ ಆಸ್ಪತ್ರೆ ಆವರಣದಲ್ಲೇ ಇದ್ದರೂ ವಿವೇಕನ ಮುಖ ನೋಡುವುದು ತಡವಾಯಿತು. ಡಲ್ಲಾದ ಮುಖಭಾವ ಗಮನಿಸಿದ ಪತ್ನಿ ಭಾವನಾ ಮಲಗಿದ್ದಲ್ಲೇ ಏನಾಯಿತ್ರಿ?’ ಎಂದು ಕಣ್ಸನ್ನೆ ಮಾಡಿದಳು. ಮಾತಾಡಲಾಗದೆ‌‌ಕಣ್ಣು‌ಮುಚ್ಚಿ, ಕೆಳತುಟಿ ಹೊರ ತೆಗೆದು ತಲೆ ಅಲುಗಾಡಿಸಿದೆ. ಆಯಿ?’ ಅಂದಳು!. ಇಬ್ಬರ ಕಣ್ಣಂಚಲಿ ನೀರು…

ಇರಲಿ ಬಿಡು ದೈವೇಚ್ಛೆಯಂತೆ ಆಗಲಿ ಎಂದು ಸಮಾಧಾನ ಮಾಡಿಕೊಂಡು ಪಕ್ಕದ ಬೆಡ್ ನಲ್ಲಿದ್ದ ಮಗನತ್ತ ಕಣ್ಣರಳಿಸಿದರೆ ನನ್ನೊಳಗೊಂದು ಹೊಸ ಸಂಚಲನವೇ  ಸೃಷ್ಟಿ ಆಯಿತು. ಅಮ್ಮನ ಮೊಗಾರವಿಂದವೇ ಕಣ್ಮುಂದೆ ಬಂದಂತೆ ಹೊಳಪು. ಥೇಟು ಅವ್ವನಂತೆ ಕಣ್ಣು ರೆಪ್ಪೆ ಪಟಪಟನೇ ಬಡಿದು ಅಚ್ಚರಿ ಮೂಡಿಸಿ, ಕಿರುನಗೆ ಬೀರಿದ ವಿವೇಕ ಹುಟ್ಟುತ್ತಲೇ ವಿವೇಕ ಪ್ರದರ್ಶಿಸಿ ಅಮ್ಮನ ಸುಗುಣ ದರ್ಶನ ನೀಡಿದನು.

- Advertisement - 

ವಿನಯ-ವಿವೇಕವೇ ಅವ್ವನ ಗುಣ ಔದಾರ್ಯ, ವೈಶಿಷ್ಟ್ಯ. ಬಂಧು-ಬಳಗ ದೇವತೆಯೆಂದು ಕರೆಯಲು ಸದ್ಗುಣಗಳೇ ಕಾರಣ. ನನ್ನ ಮಕ್ಕಳಲ್ಲಿ ಅವ್ವನ ಗುಣಗಳೇ ಬರಲೆಂದು ವಿನಯ-ವಿವೇಕ ಎಂಬ ಹೆಸರಿನಿಂದ ಕರೆದೆನು.‌ಬೆಳೆದಂತೆ ವಿವೇಕನ ನಗು, ನಡೆ-ನುಡಿ, ಕೂಡುವ ಸ್ಟೈಲು, ಉಣ್ಣುವ ವಿಧಾನ, ಬಂಧುಗಳಿಗೆ ಕೊಡುವ ಪ್ರೀತಿ ಎಲ್ಲವೂ ಅವ್ವನ ಜೀವಂತಿಕೆಗೆ ಸಾಕ್ಷಿ.

ದೂರದ ಚಿತ್ರದುರ್ಗದಲ್ಲಿದ್ದರೂ ನನ್ನೂರಿನ ಬಂಧು-ಬಳಗ ನೆನೆಯುವುದು. ಊರೆಂದರೆ ಸಾಕು ಹಿಗ್ಗಿನಿಂದ ಸಿದ್ಧವಾಗುವನು. ನಮ್ಮೂರಿಗೆ ಯಾವಾಗ ಹೋಗೋಣಎಂದು ಕೇಳುತ್ತಲೇ ಇರುತ್ತಾನೆ. ತಾನೇ ಎಲ್ಲರನ್ನೂ ನೆನಪಿಸಿ ಕರೆ ಮಾಡಿ ಪ್ರೀತಿಯಿಂದ ಮಾತಾಡುವ ಪರಿ, ಬಂಧುತ್ವ ಬೆರಗುಗೊಳಿಸುತ್ತದೆ. ಅಮ್ಮನ ಅಪರಾವತಾರವೇ ವಿವೇಕ. ಅಮ್ಮ ಹುಟ್ಟಿ ಬರಲಿಲ್ಲ ಎಂಬ ಕೊರಗು ಕಿಂಚಿತ್ತೂ ಕಾಡದಂತೆ ಮಟಾಮಾಯ ಮಾಡಿ ಮನೆಯೇ ಮಂತ್ರಾಲಯ ಮನಸೇ ದೇವಾಲಯಆಗಿಸಿದವನು ಮಾತೃಛಾಯೆಯ ವಿವೇಕ.

ವಿವೇಕ ಐದು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ನನ್ನೂರಿನ ಸ್ವಗೃಹದಲ್ಲೇ ವಿವೇಕ ಸಂಭ್ರಮಮಾಡೋಣ. ಬಂಧು-ಬಳಗ ಸೇರೋಣ ಎಂದು ಎಲ್ಲರೂ ಸೇರಿ ನಿರ್ಧರಿಸಿದೆವು. ಹದಿನೈದು ದಿನದ ಹಿಂದೆ ಫಿಕ್ಸಾದ ಪ್ರೋಗ್ರಾಂಗೆ ದಿನಗಣನೆಯೇ ಶುರುವಾಯಿತು. ಇವತ್ತೇ ಊರಿಗೆ ಹೋಗೋಣ ಎಂದು ನಿತ್ಯ ಕಾಡ ತೊಡಗಿದನು ವಿವೇಕ. ಬಸ್ ಟಿಕೆಟ್ ಸಿಕ್ಕಿಲ್ಲಎಂದೆಲ್ಲ ಹೇಳಿ ದಿನ ಮುಂದೂಡುವುದು; ಅವನ ಪ್ರಶ್ನೆಗಳಿಗೆ ಉತ್ತರಿಸುವುದೇ ಬಲು ಕಷ್ಟದ ಕೆಲಸ ಆಗಿ ಹೋಗಿತ್ತು.

ನಿನ್ನೆ ಬೆಳಗ್ಗೆಯಷ್ಟೇ ಊರಿಗೆ ಬಂದು ಅಪ್ಪನೆದುರು ಕುಳಿತೆನು. ಮೊಬೈಲ್ ನಲ್ಲಿ ಅವ್ವ ಮತ್ತು ವಿವೇಕನ ಫೋಟೋ ನೋಡುತ್ತಿದ್ದವನಿಗೆ AI ನತ್ತ ಚಿತ್ತ ಹರಿಯಿತು. ಪ್ರಕೃತಿ ಸೇರಿ ಇತರೆ Backgroundನ ಚಿತ್ರ ಕ್ರಿಯೇಟ್ ಮಾಡಲೆತ್ನಿಸಿದರೆ ಪ್ರತಿಫಲವೇ ಬರಲಿಲ್ಲ. ಫೋಟೋ ಕ್ರಿಯೇಟ್ ಆಗಲೇ ಇಲ್ಲ.

ಕೊನೆಗೆ ಅಪ್ಪನ ಜತೆ ಮಾತಾಡುತ್ತಲೇ ಯಾವ ಆಪ್ಷನ್ ಒತ್ತಿದೆನೋ,‌ಅದೇನು ಟೈಪ್ ಮಾಡಿದೆನೋ‌ಗೊತ್ತಿಲ್ಲ. ಅಮ್ಮ ನಮ್ಮ ಮನೆಯಲ್ಲೇ ವಿವೇಕನ ಹೆಗಲ ಮೇಲೆ ಕೈ ಹಾಕಿ ಕುಳಿತ ಚಿತ್ರ‌ಮೊಬೈಲ್ ಸ್ಕ್ರೀನ್ ನಲ್ಲಿ ಪ್ರತ್ಯಕ್ಷವಾಗಿ ಅಪಾರ ಪ್ರೀತಿ ಆನಂದ ಹುಕ್ಕಿಸಿತು.

AIನ ಅದ್ಭುತ ಕಲ್ಪನೆಯೇ ನನ್ನಲಿ ನವ ಬೆರಗು ಮೂಡಿಸಿತು. ವಿವೇಕನ ಜನ್ಮ ದಿನದ ಸಂದರ್ಭದಲ್ಲಿ ಅಮ್ಮನ ವಿಶೇಷ ದರ್ಶನಾಶೀರ್ವಾದ ದಕ್ಕಿದ ಭಾವ ಆವರಿಸಿತು. ಧನ್ಯೋಸ್ಮಿ… ಸದಾಕಾಲ ನಮ್ಮೆಲ್ಲರ ಮೇಲೆ ದೈವಗುಣದ ಅಮ್ಮನ ಆಶೀರ್ವಾದ ಇರಲಿ. ಅವ್ವ ಇದ್ದಾಳೆ!.
ಲೇಖನ:ಬಸವರಾಜ ಮುದನೂರ್, ಪತ್ರಕರ್ತರು, ಟಿವಿ9, ಚಿತ್ರದುರ್ಗ.

 

Share This Article
error: Content is protected !!
";