ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಟಕ ವಿಮರ್ಶೆ : “ನಮ್ಮ ನೆಲ ಜೀವ ಜಲ”.
ಶ್ರೀ ನ.ಮೂ ಶ್ರೀರಾಮ್ ರಚಿಸಿ ನಿರ್ದೇಶಿಸಿದ “ನಮ್ಮ ನೆಲ ಜೀವ ಜಲ” ನಾಟಕವನ್ನು ನಾಡಪ್ರಭು ಕೆಂಪೇಗೌಡ ಫೌಂಡೇಶನ್ ನ ಸಾಂಸ್ಕೃತಿಕ ವಿಭಾಗವಾದ “ರಂಗತರಂಗ” ತಂಡವು ದಿನಾಂಕ 12/10/2025 ರ ಭಾನುವಾರ ಸಂಜೆ ದೆಹಲಿಯ ಕರ್ನಾಟಕ ಸಂಘದ ವೇದಕೆಯಲ್ಲಿ ಅಭಿನಯಿಸಿತು.
ಭ್ರಷ್ಟಾಚಾರದಿಂದ ಮಲಿನಗೊಂಡ ಸಮಾಜದ ಓರೆಕೋರೆಗಳನ್ನು ಬಿಂಬಿಸುವಂತ ಕಥಾವಸ್ತುಗಳನ್ನೊಳಗೊಂಡ ನಾಟಕಗಳು ಸಿನಿಮಾ ಕಥೆ ಕಾದಂಬರಿಗಳು ಈಗಾಗಲೇ ಸಾಕಷ್ಟು ಬಂದಿವೆ. ಆದರೂ ಇಂಥಹ ಭ್ರಷ್ಟಾಚಾರಿಗಳ ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಡಿ ಗೆದ್ದ ಉದಾಹರಣೆಗಳು ಇತಿಹಾಸದಲ್ಲಿ ಎಲ್ಲೂ ದಾಖಲಾಗಿರುವುದು ಅತೀ ವಿರಳವೆಂದೇ ಹೇಳಬಹುದು.
ಭ್ರಷ್ಟಾಚಾರ ಅನ್ನುವುದು ಎಲ್ಲೆಡೆಯೂ ಹರಡಿಕೊಂಡ ಸಾಂಕ್ರಾಮಿಕ ರೋಗ. ಇದಕ್ಕೆ ಮದ್ದುಗಳಿಲ್ಲ. ಇಂತ ರೋಗದ ವಿರುದ್ದಧ ಹೋರಾಟಗಳು ನಿರಂತರ ಕೆಂಡದ ಮಳೆಯಾಗಿ ಸುರಿದದ್ದೂ ಇದೆ. ತಣ್ಣಗಾಗಿದ್ದೂ ಇದೆ. ಇಲಾಖೆ ಸರ್ಕಾರ ರಾಜಕಾರಣಿಗಳು ಸದಾ ಎಮ್ಮೆ ಚರ್ಮ ಹೊದ್ದುಕೊಂಡಿರುವುದರಿಂದ ಜನಸಾಮಾನ್ಯರ ಕೂಗು, ಹೋರಾಟ, ಪ್ರತಿಭಟನೆಗಳು ಎಂದಿಗೂ ನಾಟುವುದಿಲ್ಲ. ಆದಾಗ್ಯೂ ಆಗೊಮ್ಮೆ ಹೀಗೊಮ್ಮೆ

ಇಂತದ್ದೊಂದು ಹೋರಾಟದ ಬಿಸಿ ತಾಕಿ ಕಿಚ್ಚು ಹುಟ್ಟಿಕೊಳ್ಳುತ್ತದೆ. ಇಂತಹದ್ದೊಂದು ಕಿಚ್ಚನಚ್ಚಿಕೊಂಡು ಹುಟ್ಟಿದ ನಾಟಕವೇ “ನಮ್ಮನೆಲ ಜೀವ ಜಲ”. ಕಥಾವಸ್ತು .
ಹಾಸ್ಯ ವಿಡಂಬನೆ ಒಂದಷ್ಟು ಗಂಭೀರತೆಯಲ್ಲಿ ಪ್ರಸ್ತುತ ಸಮಸ್ಯೆಯನ್ನು ಅನಾವರಣಗೊಳಿಸುತ್ತದೆ. ಜೊತೆಗೆ ನಾಟಕವನ್ನು ಪ್ರಸ್ತುತಪಡಿಸಿದ ರೀತಿ ತುಂಬ ಸೊಗಸಾಗಿತ್ತು. ಭ್ರಷ್ಟ ಕಂಟ್ರಾಕ್ಟರ್ ದೇವರಾಯ ಮತ್ತು ಶಾಸಕ ಈ ಇಬ್ಬರ ನಡುವಿನ ಹೊಂದಾಣಿಕೆ ಇಲ್ಲಿ ಕೇವಲ ನಾಟಕದ ಪಾತ್ರವಾಗಿದ್ದರೂ ಇಂತ ಎಷ್ಟೋ ಪಾತ್ರಗಳು ಸರ್ಕಾರದ ಅವಿಭಾಜ್ಯ ಅಂಗವಾಗಿ ಸಮಾಜದ ಕಂಟಕವಾಗಿ ನಮ್ಮನ್ನು ಕಾಡುತ್ತಲೇ ಇವೆ.
ರೂಪಿಸಿದ ಯೋಜನೆಗಳು ಪ್ರಾಮಾಣಿಕವಾಗಿ ಜನರನ್ನು ತಲುಪಲಿ ಎಂಬ ಉದ್ದೇಶಗಳು ಜಿಲ್ಲಾಧಿಕಾರಿಗಳಿಗೆ ಇದ್ದರೂ ಶಾಸಕ ಮತ್ತು ಕಂಟ್ರಾಕ್ಟರ್ ತಮ್ಮ ಸ್ವಹಿತಾಸಕ್ತಿಗೆ ಸ್ವಾರ್ಥಕ್ಕೆ ಬಳಸಿಕೊಂಡು ಅಮಾಯಕ ಜನರನ್ನು ವಂಚಿಸುತ್ತಾರೆ. ಇದು ಎಲ್ಲಾ ಸರ್ಕಾರಗಳು ತಮ್ಮ ಆದ್ಯ ಕರ್ತವ್ಯವೆಂಬಂತೆ ಭಾವಿಸುತ್ತವೆ ಮತ್ತು ಪಾಲಿಸುತ್ತವೆ ಕೂಡ. ಭ್ರಷ್ಟಾಚಾರ ಇಲ್ಲದ ಸರ್ಕಾರ ಅಥವಾ ರಾಜಕಾರಣಿ ನಮ್ಮ ನೆಲದಲ್ಲಿ ಹುಟ್ಟಿದ್ದು ಕಡಿಮೆಯೇ. ಆದರೆ ಪ್ರತಿಭಟಿಸುವ ಹಕ್ಕನ್ನು ತನ್ನ ಉಸಿರೆಂಬಂತೆ ಭಾವಿಸಿದ ಜನರು ಪಂಚಾಯ್ತಿಯ ಮುಂದೆ ತಾವು ಅನುಭವಿಸಿದ ಪರಿಪಾಟಲನ್ನು ಎಗ್ಗಿಲ್ಲದೇ ಎಲ್ಲರ ಮುಂದೆ ಹೇಳುವ ಮೂಲಕ ತಮ್ಮ ಅನ್ಯಾಯಕ್ಕೆ ತೊಡೆತಟ್ಟಿ ನಿಲ್ಲುವಂತೆ ಮಾಡಿರುವುದು ನಿರ್ದೇಶಕರ ಸಾಮಾಜಿಕ ಕಳಕಳಿಯ ಪ್ರಾಮಾಣಿಕ ನಡೆ ಮತ್ತು ನಾಟಕದ ಬಹು ಮುಖ್ಯ ಘಟ್ಟ.
ಜನ ಸಾಮಾನ್ಯನ ಪ್ರಾಮಾಣಿಕ ಪ್ರಯತ್ನವನ್ನು ಹಕ್ಕಿನ ರೂಪದಲ್ಲಿ ನಾಟಕಕಾರರು ಅವಲೋಕಿಸಿರುವುದು ಮತ್ತು ಅದನ್ನು ಪಾತ್ರಗಳ ಮೂಲಕ ತೆರೆಗೆ ತಂದಿರುವುದು ಅತ್ಯಂತ ಸೂಕ್ಷ್ಮ ಸಂವೇದನೆಯ ನಡೆಯೂ ಹೌದು.
ಮೇಲು ನೋಟಕ್ಕೆ ನೀರು. ಕೊಳವೆ ಭಾವಿ. ಉದ್ಘಾಟನೆ. ಶಾಸಕನ ಆಶ್ವಾಸನೆ. ಗ್ರಾಮಸ್ತರ ನಂಬಿಕೆ. ಪಂಚಾಯ್ತಿ.. ಇವೆಲ್ಲ ನಮ್ಮ ನಿತ್ಯದ ಬದುಕಿಗೆ ಹಾಸುಹೊಕ್ಕಾಗಿವೆ. ನೂರೈವತ್ತು ಅಡಿಗೆ ಸಿಗುವ ನೀರನ್ನು ನಾನೂರೈವತ್ತು ಅಡಿ ಬೋರ್ ವೆಲ್ ಕೊರೆಸಿ ಸರ್ಕಾರದ ಹಣವನ್ನು ಲಪಾಟಾಯಿಸುವ ಕಂಟ್ರಾಕ್ಟರ್ ಶಾಸಕನ ಆಶ್ರಯದಿಂದ ಮೆರೆಯುತ್ತಾನೆ. ಆದರೆ ತನ್ನ ಭ್ರಷ್ಟಾಚಾರದ ವಿರುದ್ದ ಸಿಡಿಯುವ ಜನರೆದಿರು ಕೂರಲಾಗದೇ ಅಸಾಹಯಕನಾದಾಗ ಕುಮ್ಮಕ್ಕು ಕೊಟ್ಟ ಶಾಸಕ ಕೂಡ ತನ್ನ ಸಹಾಯಕ್ಕೆ ಬರದೇ ಕೈಕೊಟ್ಟಾಗ ತನ್ನ ತಪ್ಪಿನ ಅರಿವಿನಿಂದ ದೇವರಾಯ ಕ್ಷಮೆ ಯಾಚಿಸುವುದು ನಾಟಕೀಯವೆನಿಸುತ್ತದೆಯಾದರೂ ತನ್ನ ತಪ್ಪಿನ ಅರಿವಾಗಿ ತನ್ನನ್ನು ತಾನೇ ತಿದ್ದಿಕೊಳ್ಳುವತ್ತ ಮನಸ್ಸು ಮಾಡುತ್ತಾನೆನ್ನುವ ಸಮಾಧಾನವೊಂದು ಪ್ರೇಕ್ಷಕರಿಗೆ ತಲುಪುತ್ತದೆ ಎಂಬುದೇ ಸಮಾಧಾನದ ಅಂಶ.
ಆದರೆ ನಾಟಕದ ಪಾತ್ರಧಾರಿಗಳಲ್ಲದೇ ನಿಜ ಬದುಕಿನಲ್ಲಿ ಯಾವುದಾದರೂ ಕಂಟ್ರಾಕ್ಟರ್ ಗಳು ಕ್ಷಮೆಯಾಚಿಸುತ್ತಾರೆಯೇ?
ಶಾಸಕರು ಎಂದಾದರೂ ತಮ್ಮನ್ನು ತಾವೇ ಆತ್ಮವಾಲೋಕನ ಮಾಡಿಕೊಳ್ಳುತ್ತಾರೆಯೇ? ಜಿಲ್ಲಾಧಿಕಾರಿಗಳು ಜನಸಾಮಾನ್ಯರ ದನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡಬಲ್ಲರೇ? ಅಥವಾ ತಪ್ಪು ನಡೆದಾಗ ಸಾರ್ವಜನಿಕರು ಎಗ್ಗಿಲ್ಲದೇ ಖಂಡಿಸುವ ಧೈರ್ಯ ತೋರಬಲ್ಲರೇ? ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕನಾಗಿ ನನ್ನನ್ನು ಕಾಡುತ್ತವೆ.
ಒಟ್ಟಾರೆ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಪಡಿಸುವ ಪರಿಕ್ರಮವೂ ಆಗಿ ದೇವರಾಯ ಮತ್ತು ಶಾಸಕನ ನಡುವಿನ ಅಜ್ಡೆಸ್ಟಮೆಂಟ್ ಸಂಬಂಧವನ್ನು ಅನಾವರಣಗೊಳಿಸುವುದರ ಮೂಲಕ ಜನರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಜಿಲ್ಲಾಧಿಕಾರಿಗಳದ್ದು ತುಂಬ ಮೆಚ್ಚುಗೆಯ ನಡೆ.
ಜಿಲ್ಲಾಧಿಕಾರಿಗಳಾಗಿ ಶ್ರೀಮತಿ ರೂಪಶ್ರೀ, ದಿಟ್ಟ ಮಹಿಳೆ ಚೌಡಮ್ಮನಾಗಿ ಶ್ರೀಮತಿ ಶೋಭ ನಾಗರಾಜ್, ಕಾಳೇಗೌಡ ರಾಗಿ ವಸಂತ್ ಕುಮಾರ್, ಮಂತ್ರಿಯಾಗಿ ಕೆ.ಎಸ್. ಮೂರ್ತಿ, ಕಾರ್ಯದರ್ಶಿಯಾಗಿ ಶ್ರೀನಿವಾಸಯ್ಯ, ಕಂಟ್ರಾಕ್ಟರ್ ದೇವರಾಯನಾಗಿ ವೆಂಕಟೇಶ ಹೆಚ್ ಮತ್ತು ಸೂತ್ರದಾರನಾಗಿ ನ.ಮೂ ಶ್ರೀರಾಮ್ ಅವರ ಅಭಿನಯ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ ಮತ್ತು ಕಪ್ಪಣ್ಣನಾಗಿ ಅರುಣ್ ಸಿ.ಎಸ್ ಹಾಗೂ ಯಲ್ಲಣ್ಣನಾಗಿ ಯಲ್ಲಾಲಿಂಗ ಕೊಪ್ಪದ ಹಾಸ್ಯ ಉಣಬಡಿಸಿದ್ದಾರೆ.
ಅಲ್ಲದೆ ಕಮಲಿ ಪಾತ್ರದಲ್ಲಿ ಶ್ರೀಮತಿ ಲಿಖಿತಾ ಕೊಪ್ಪದ್ ಮತ್ತು ಭೈರವಿ ಪಾತ್ರದಲ್ಲಿ ಶ್ರೀಮತಿ ಶಿಲ್ಪಾ ಪುರುಷೋತ್ತಮ ಹಾಗೂ ಕೆಂಚನ ಪಾತ್ರದಲ್ಲಿ ಪುನೀತ್ ಗೌಡ, ಮಕ್ಕಳು ಮತ್ತು ಹಳ್ಳಿಯ ಹೆಂಗಸರ ಪಾತ್ರದಾರಿಗಳು ಎಲ್ಲರೂ ಅವರಿಗೆ ಕೊಟ್ಟಂತಹ ಚಿಕ್ಕ ಪಾತ್ರಗಳನ್ನು ಅಧ್ಬುತವಾಗಿ ನಟಿಸಿದ್ದಾರೆ.
ರಂಗಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ ಕಲಾವಿದರ ಸ್ಪಷ್ಟವಾದ ಮಾತುಗಳು, ನಟನೆ ಮತ್ತು ವೇಷಭೂಷಣಗಳು ನಾಟಕವನ್ನು ಅದ್ಭುತವೆನ್ನುವಂತೆ ತೆರೆಮೇಲೆ ಮೂಡಿಸಿದ್ದು ನಿರ್ದೇಶಕರ ಶ್ರಮವನ್ನು ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ವ್ಯಕ್ತಪಡಿಸುತ್ತದೆ.
ನಿರ್ದೇಶಕರಿಗೆ ಮತ್ತು ಅಭಿನಯಿಸಿದ ಎಲ್ಲಾ ಕಲಾವಿದರಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವು ನೀಡಿದ ಎಲ್ಲರಿಗೂ ಅಭಿನಂದನೆಗಳು. ದೆಹಲಿ ಕರ್ನಾಟಕ ಸಂಘದ ಕನ್ನಡ ಕಾರ್ಯಕ್ರಮಗಳು ದೇಶ ವಿದೇಶಗಳಲ್ಲೂ ಮನೆಮಾತಾಗಿವೆ ಮುಂದೆಯೂ ಕೂಡ ಇನ್ನೂ ಉತ್ತಮೋತ್ತಮ ಕನ್ನಡ ಕೈಂಕರ್ಯಗಳು ಸಾಗಲಿ.ನಾಟಕ ವಿಮರ್ಶೆ–ಅಶ್ವತ್ಥ ಕಲ್ಲೇದೇವರಹಳ್ಳಿ. ಲೇಖಕರು, ಬರಹಗಾರರು, ಕವಿಗಳು ಹಾಗೂ ಚಿತ್ರ ನಿರ್ದೇಶಕರು.

