ಜಾತಿ ಸಮೀಕ್ಷೆಯಲ್ಲಿ ಚಿತ್ರದುರ್ಗ 4ನೇ ಸ್ಥಾನ-ಜಿಲ್ಲಾಧಿಕಾರಿ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳೆದ ಸೆಪ್ಟೆಂಬರ್ 22 ರಿಂದ ಪ್ರಾರಂಭಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಜಿಲ್ಲೆಯಲ್ಲಿ ಶೇ. 95.23 ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲಿಯೇ ಹೆಚ್ಚು ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಿದ ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆ 04 ನೇ ಸ್ಥಾನದಲ್ಲಿದೆ.

ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಶ್ರಮಿಸಿದ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement - 

ಸರ್ಕಾರದ ಮಟ್ಟದಲ್ಲಿ ಯೋಜನೆಗಳು, ನೀತಿಗಳನ್ನು ರೂಪಿಸುವಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳಷ್ಟು ಮಹತ್ವದ್ದಾಗಿದ್ದು, ಹೀಗಾಗಿ ಸಮೀಕ್ಷೆ ಕಾರ್ಯದ ಬಗ್ಗೆ ಸರ್ಕಾರ ತೀವ್ರ ಒತ್ತು ನೀಡಿ, ಸಮೀಕ್ಷೆ ಕೈಗೊಳ್ಳಲು ನಿರ್ದೇಶನ ನೀಡಿರುತ್ತದೆ.

ಅದರಂತೆ ಕಳೆದ ಸೆ. 22 ರಿಂದ ಸಮೀಕ್ಷೆ ಕಾರ್ಯ ಪ್ರಾರಂಭಗೊಂಡಿತ್ತು.  ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ರಜೆ ಹಾಗೂ ಹಬ್ಬಗಳ ನಡುವೆಯೂ ಸಾಕಷ್ಟು ಶ್ರಮ ವಹಿಸಿ, ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.

- Advertisement - 

ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ನಗರ-ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಮೀಕ್ಷಾ ಕಾರ್ಯದ ಯಶಸ್ವಿಗೆ ಸಾಕಷ್ಟು ಶ್ರಮಿಸಿದ್ದಾರೆ.

 ಜಿಲ್ಲೆಯಲ್ಲಿ ಈವರೆಗೆ 4,60,193 ಮನೆಗಳ ಸಮೀಕ್ಷೆ ಕಾರ್ಯ ಕೈಗೊಂಡು, 17.80 ಲಕ್ಷ ಜನರ ಸಮೀಕ್ಷೆ ಮಾಡಿದ್ದು, ಶೇ. 95.23 ರಷ್ಟು ಗುರಿ ಸಾಧಿಸುವ ಮೂಲಕ ಯಶಸ್ವಿ ಸಮೀಕ್ಷೆ ಮಾಡಲಾಗಿದೆ.

 ರಾಜ್ಯದಲ್ಲಿ ಜಿಲ್ಲೆಯು 04 ನೇ ಸ್ಥಾನದಲ್ಲಿದೆ.  ಇದಕ್ಕಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು.
ಇದುವರೆಗೂ ಸಮೀಕ್ಷೆಯಿಂದ ಯಾವುದೇ ಕುಟುಂಬಗಳು ಬಿಟ್ಟು ಹೋಗಿದ್ದಲ್ಲಿ ಅಂತಹವರು ಸಂಬಂಧಪಟ್ಟ ತಹಶೀಲ್ದಾರರ ಕಚೇರಿಗೆ ಮಾಹಿತಿ ನೀಡಿ, ಸಮೀಕ್ಷೆಗೆ ಮಾಹಿತಿ ನೀಡಬಹುದಾಗಿದೆ.

 ಅಥವಾ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಮೊಳಕಾಲ್ಮುರು ತಾಲ್ಲೂಕು-9743085676, ಚಳ್ಳಕೆರೆ-080195-200130, 9972997738, ಚಿತ್ರದುರ್ಗ-08194-235034, ಹಿರಿಯೂರು-6362474421, ಹೊಸದುರ್ಗ-9972385061, ಹೊಳಲ್ಕೆರೆ-08191-200021 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಸಾರ್ವಜನಿಕರು ತಮ್ಮ ಮನೆಯ ಸಮೀಕ್ಷೆ ಕಾರ್ಯವಾಗದಿದ್ದಲ್ಲಿ ನೇರವಾಗಿ  https://kscbcselfdeclaration.karnataka.gov.in ವೆಬ್‍ಸೈಟ್‍ನಲ್ಲಿ ಕೂಡ ತಮ್ಮ ಮನೆಯ ಸಮೀಕ್ಷೆ ಕಾರ್ಯವನ್ನು ಮಾಡಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Share This Article
error: Content is protected !!
";