ಹಾಸನಾಂಬೆ ದರ್ಶನಕ್ಕೆ ಬಂದ ಕುಮಾರಸ್ವಾಮಿಗೆ ಅವಮಾನ, ಪ್ರತಿಭಟನೆ

News Desk

ಹಾಸನಾಂಬೆ ದರ್ಶನಕ್ಕೆ ಬಂದ ಕುಮಾರಸ್ವಾಮಿಗೆ ಅವಮಾನ, ಪ್ರತಿಭಟನೆ
ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನಾಂಬೆ ದರ್ಶನಕ್ಕೆ ಬಂದ ವೇಳೆ ಹಾಸನ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡದೇ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಾಸನಾಂಬೆ ದೇವಾಲಯ ಮುಖ್ಯದ್ವಾರ ಬಳಿ ಜೆಡಿಎಸ್ ದಿಢೀರ್ ಪ್ರತಿಭಟನೆ ನಡೆಸಿದೆ.

ಹಾಸನದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ, ರಸ್ತೆ ತಡೆದು ನೂರಾರು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.

- Advertisement - 

ಹಾಸನ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಕಾರ್ಯಕರ್ತರು, ಮುಖಂಡರು ಒತ್ತಾಯಿಸಿದರು. ಈ ವೇಳೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಕಿಡಿ ಕಾರಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರಲ್ಲದೆ ದಿಢೀರ್​ ಪ್ರತಿಭಟನೆಯಿಂದ ಶಿಷ್ಟಾಚಾರ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಶಾಸಕ ಸ್ವರೂಪ್​ ಪ್ರಕಾಶ್​ ಪ್ರತಿಭಟನೆ ವೇಳೆ ಮಾತನಾಡಿ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಮೆರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಗೆ ಕುಮಾರಸ್ವಾಮಿ ಅವರ ಕೊಡುಗೆ ಸಾಕಷ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಸನಾಂಬೆ ದರ್ಶನಕ್ಕೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಬಂದಾಗ ಅವರ ನಡೆ ಸರಿಯಲ್ಲ. ಜಿಲ್ಲಾಧಿಕಾರಿಗಳು ಕೂಡ ಸರ್ವಾಧಿಕಾರಿ ರೀತಿ ವರ್ತನೆ ಮಾಡಿದ್ದಾರೆ. ಜಿಲ್ಲೆಗೆ ಇಂತಹ ಡಿಸಿ ಬಂದಿರೋದು ನಮ್ಮ ದುರಾದೃಷ್ಟ. ಕುಮಾರಸ್ವಾಮಿ ಅವರಿಗೆ ಆದ ಅವಮಾನಕ್ಕೆ ಜಿಲ್ಲಾಧಿಕಾರಿಗಳು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

- Advertisement - 

ಜೆಡಿಎಸ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಕಾರಣ ಹಾಸನಾಂಬೆ ದೇವಾಲಯದ ಪ್ರದೇಶ ರಣಾಂಗಣವಾಗಿ ಮಾರ್ಪಟ್ಟಿತು. ಪ್ರತಿಭಟನಾಕಾರರು ದೇವಾಲಯದ ಒಳ ನುಗ್ಗಲು ಯತ್ನಿಸಿದ್ದು,‌ ಬ್ಯಾರಿಕೇಡ್​ ಗಳನ್ನ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

 ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸಿ ಹಾಗೂ ಆಡಳಿತ ಅಧಿಕಾರಿ ಮಾರುತಿ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಕೇಂದ್ರ ಸಚಿವರನ್ನ ಶಿಷ್ಟಾಚಾರದಂತೆ ಜಿಲ್ಲಾಡಳಿತ ಗೌರವಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಸಾಮಾನ್ಯ ಶಾಸಕರು ಬಂದರೂ ಅವರಿಗೆ ಗೌರವ ನೀಡಲಾಗುತ್ತೆ. ಆದರೆ ಜಿಲ್ಲೆಯನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಸಲ್ಲಿಸಬೇಕಾದ ಗೌರವವನ್ನು ನೀಡುವಲ್ಲಿ ಜಿಲ್ಲಾಡಳಿತದಿಂದ ಲೋಪವಾಗಿದೆ. ದೇವಸ್ಥಾನಕ್ಕೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಜಿಲ್ಲಾಧಿಕಾರಿಗಳು ಸ್ವಾಗತಿಸಿದ್ದು ಬಿಟ್ಟರೆ, ಆ ಮೇಲೆ ಯಾರೂ ಸ್ಥಳದಲ್ಲಿ ಇರಲಿಲ್ಲ ಎನ್ನುವ ಆರೋಪ ಕೇಳಿ ಬಂದಿವೆ.

 

 

Share This Article
error: Content is protected !!
";