ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಹೆಮ್ಮೆಯ ನಂದಿನಿ ಸಿಹಿ ತಿಂಡಿ ಉತ್ಪನ್ನಗಳು ಗುರಿ ಮೀರಿ ಮಾರಾಟವಾಗಿದೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು. ವಿಕಾಸಸೌದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿ 33.48 ಕೋಟಿ ರೂ. ವಹಿವಾಟು ದಾಖಲಿಸಲಾಗಿತ್ತು.
ಆದರೆ ಪ್ರಸಕ್ತ 2025ನೇ ಸಾಲಿನ ದೀಪಾವಳಿ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆ ಪರಿಗಣಿಸಿ ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1,000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗಿದಪಡಿಸಲಾಗಿತ್ತು ಎಂದು ವಿವರಿಸಿದರು.
ದಾಖಲೆ ಪ್ರಮಾಣದ ಮಾರಾಟ:
ಸಂಸ್ಥೆ ನೀಡಿದ ಗುರಿ ಮೀರಿ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 46 ಕೋಟಿ ರೂ.ಗಳ ದಾಖಲೆ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲಿಗಲ್ಲನ್ನು ನಿರ್ಮಿಸಲಾಗಿದೆ.
ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ. 38ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಎಂದು ಸಚಿವರು ತಿಳಿಸಿದರು.
ಈ ಸಾಧನೆ “ನಂದಿನಿ” ಬ್ರಾಂಡ್ನ ಗುಣಮಟ್ಟ ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದು ಸಚಿವರು ತಿಳಿಸಿದರು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯು “ನಂದಿನಿ” ಬ್ರಾಂಡ್ ಅನ್ನು ಗ್ರಾಹಕರ ವಿಶ್ವಾಸದ ಪ್ರತೀಕವನ್ನಾಗಿ ಮಾಡಿದೆ. ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿ ತಿನಿಸುಗಳಿಗೆ ರಾಜ್ಯಾದ್ಯಂತ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಈ ಹಬ್ಬದ ಅವಧಿಯಲ್ಲಿ ನಂದಿನಿ ಬ್ರಾಂಡ್ನಡಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಸಿದ್ಧತೆ ಕೈಗೊಂಡಿತ್ತು ಎಂದು ಸಚಿವ ವೆಂಕಟೇಶ್ ತಿಳಿಸಿದರು.
ಕಳೆದ ಐದು ದಶಕಗಳಿಂದ ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್) ಸಂಸ್ಥೆಯು ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಹೈನು ಸಹಕಾರಿ ಚಳವಳಿ ಬಲಪಡಿಸುವಲ್ಲಿ ಮುಂಚೂಣಿಯಲ್ಲಿದೆ. ನಿತ್ಯ ರಾಜ್ಯದ ವಿವಿಧ ಹೈನುಗಾರರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
“ನಂದಿನಿ” ಬ್ರಾಂಡ್ ಅಡಿಯಲ್ಲಿ ಹಾಲಿನೊಂದಿಗೆ ತುಪ್ಪ ಬೆಣ್ಣೆ, ಪನೀರ್, ಸಿಹಿತಿನಿಸುಗಳು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 175ಕ್ಕೂ ಅಧಿಕ ಬಗೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಾಜ್ಯ ನೆರೆ ರಾಜ್ಯಗಳು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರದೇಶಗಳ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಲಬೆರಕೆ ಪತ್ತೆಯಾಗಿಲ್ಲ: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, ನಂದಿನಿಉತ್ಪನ್ನಗಳಲ್ಲಿ ಕಲಬೆರಕೆ ಇಲ್ಲ. ರಾಜ್ಯದ ಎಲ್ಲಾ ಬ್ರಾಂಡ್ಗಳನ್ನು ಚೆಕ್ ಮಾಡಿಸಿದ್ದೇವೆ. ಇಡೀ ರಾಜ್ಯದಲ್ಲಿ 16 ನಂದಿನಿಘಟಕಗಳಿವೆ. 700 ಉತ್ಪನ್ನಗಳನ್ನು ನಾವು ಚೆಕ್ ಮಾಡಿಸಿದ್ದೇವೆ. ಎಲ್ಲಿಯೂ ಕಲಬೆರೆಕೆ ಬಂದಿಲ್ಲ.
ನಮ್ಮಲ್ಲೇ ಒಂದು ವಿಜಿಲೆನ್ಸ್ ತಂಡವಿದೆ. ಆ ತಂಡ ಎಲ್ಲಾ ಕಡೆ ದಿಢೀರ್ ದಾಳಿ ಮಾಡಿ ಪರಿಶೀಲನೆ ಮಾಡ್ತಿದೆ. ಬ್ರಾಂಡ್ ಲೇಬಲ್ ಹಾಕಿದರೆ ಪತ್ತೆ ಹಚ್ಚುತ್ತೇವೆ. ಎಲ್ಲಿ ನಾವು ತುಪ್ಪತಯಾರಿಸಿದ್ದೇವೆ, ಎಲ್ಲಿ ಕಲಬೆರಕೆ ಆಗಬಹುದು ಗಮನಿಸ್ತಿದ್ದೇವೆ.ಎಲ್ಲದರ ಮೇಲೂ ನಾವುಗಮನ ಹರಿಸಿದ್ದೇವೆ ಎಂದು ಎಂಡಿ ಅವರು ತಿಳಿಸಿದರು.
ಅಗತ್ಯ ಕ್ರಮ: ರಾಜ್ಯದ ವಿವಿಧೆಡೆಗಳಲ್ಲಿರುವ ನಂದಿನಿ ಸ್ಟಾಲ್ಗಳಲ್ಲಿ ನಮ್ಮನಂದಿನಿ ಉತ್ಪನ್ನ ಬಿಟ್ಟು ಬೇರೆ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಕ್ರಮ ವಹಿಸಲಾಗುವುದು ಎಂದು ಶಿವಸ್ವಾಮಿ ಎಚ್ಚರಿಸಿದರು.
ನಂದಿನಿ ಸ್ಟಾಲ್ ಗಳಲ್ಲಿ ನಂದಿನಿ ಉತ್ಪನ್ನ ಬಿಟ್ಟು ಇತರ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಇದನ್ನ ಚೆಕ್ ಮಾಡೋಕೆ ಟೀಂ ಬಿಟ್ಟಿದ್ದೇವೆ. ಒಂದು ವೇಳೆ ಬೇರೆ ಉತ್ಪನ್ನ ಆಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ನಂದಿನಿಮಳಿಗೆಗಳ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಸಿದರು.

