ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸ್ಥಳೀಯ ಚುನಾವಣೆಗಳಲ್ಲಿ ರೈತರು ಭಾಗವಹಿಸಿ ಅಧಿಕಾರ ಪಡೆಯಬೇಕು ಎಂಬ ಉದ್ದೇಶದಿಂದ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಮ್ಮ ಸಂಘದ ಸಕ್ರಿಯ ಕಾರ್ಯಕರ್ತ ತಿಪ್ಪುರು ತಿಮ್ಮಣ್ಣ ಅವರನ್ನು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು ಅ. 25ರಂದು ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಬಹಳ ಗಟ್ಟಿಯಾಗಿ, ವ್ಯವಸ್ಥಿತವಾಗಿ ಕೃಷಿ ಕ್ಷೇತ್ರದಲ್ಲಿ ರೈತರ ಸಹಕಾರಿಯಾಗಿ ಹಲವು ಅವಶ್ಯಕತೆಗಳನ್ನು ಪೂರೈಸುವ ಹೆಮ್ಮೆಯ ಸಂಸ್ಥೆಯಾಗಿ ರೂಪುಗೊಂಡಿದ್ದು, ರೈತರ ಪಾಲಿನ ಆಶಾಕಿರಣವಾಗಿದೆ. ಇಂತಹ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹೈಕಮಾಂಡ್ ಒತ್ತಡಕ್ಕೆ ಮಣಿದು ಸ್ಥಳೀಯ ಹಿತಾಸಕ್ತಿಗಳನ್ನ ಕಡೆಗಣಿಸುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ನಮಗೆ ಎಂಟು ಅಭ್ಯರ್ಥಿಗಳು ನಿಲ್ಲಿಸುವ ಅವಕಾಶವಿದ್ದರೂ ಒಂದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತಾಲೂಕಿನ ಹಲವು ಸಂಘ ಸಂಸ್ಥೆಗಳು ಕನ್ನಡಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಮತ್ತು ಹೋರಾಟಗಾರರು ಒಟ್ಟಾಗಿ ಈ ಚುನಾವಣೆ ಎದುರಿಸಲು ಮುಂದಾಗಿದ್ದೇವೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗೆ ಯಾವುದೇ ಆಮಿಷಗಳನ್ನು ನೀಡದೆ ಪ್ರಾಮಾಣಿಕ ಚುನಾವಣಾ ನಿಯಮಗಳನ್ನು ಅನುಸರಿಸುವ ಮೂಲಕ ಇತರರಿಗೆ ಮಾದರಿಯಾಗುವಂತೆ ಈ ಚುನಾವಣೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಲಿದ್ದೇವೆ ಎಂದರು.
ಕನ್ನಡ ಪಕ್ಷದ ರಾಜ್ಯ ಮುಖಂಡರಾದ ಸಂಜೀವ್ ನಾಯಕ್ ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ಚುನಾಯಿತ ಪ್ರತಿನಿಧಿಗಳು ಕೇವಲ ಹೈಕಮಾಂಡ್ ಕೈಗೊಂಬೆಗಳಾಗಿ ಹೇಳಿದಂತೆ ಕೇಳುವ ಪರಿಸ್ಥಿತಿ ಎದುರಾಗಿದೆ ರಾಜಕೀಯ ಪಕ್ಷಗಳು ಸ್ಥಳೀಯ ಚುನಾವಣೆಗಳಲ್ಲಿ ಭಾಗವಹಿಸಿ ಅಧಿಕಾರ ವಹಿಸಿಕೊಂಡರು ರೈತರಿಗೆ ಒಳಿತಾಗುವುದು ಕಡಿಮೆಯೇ ಹಾಗಾಗಿ ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದರು.
ಅ.25ರಂದು ತಾಲೂಕಿನ ಹಲವು ಸಂಘಟನೆಗಳ ಪ್ರಮುಖರು ಹಾಗೂ ರೈತ ಮುಖಂಡರೊಂದಿಗೆ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ಟಿಎಪಿಎಂಸಿಎಸ್ ಕಚೇರಿ ತಲುಪಿ ನಾಮಪತ್ರ ಸಲ್ಲಿಸಲಿದ್ದೇವೆ ಎಂದರು.
ಪ್ರಾಂತ ರೈತ ಸಂಘದ ಮುಖಂಡರಾದ ಚಂದ್ರ ತೇಜಸ್ವಿ ಮಾತನಾಡಿ ಇದೊಂದು ಉತ್ತಮ ಅವಕಾಶ ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಕಾರಣಕರ್ತರಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ರೈತರು ಅಧಿಕಾರವನ್ನು ಪಡೆಯುವ ಮೂಲಕ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಬಹುದಾಗಿದೆ. ನಮ್ಮ ಸಂಘದ ವತಿಯಿಂದ ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿ ತಿಮ್ಮಣ್ಣ ಅವರ ಗೆಲುವಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಚಿಂತಕರು, ದಲಿತ ಮುಖಂಡರು ಹಾಜರಿದ್ದರು.

