ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ ರಾಜ್ಯ ಮಟ್ಟದ ೩೩ ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಸಾಧಕರು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಕೀಲರ ಸಮಾವೇಶವನ್ನು ಅ.೨೫ ರಂದು ಬೆಳಿಗ್ಗೆ ೧೧ ಕ್ಕೆ ಬೃಹನ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಎಸ್.ರಷೀದ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲಾಂಛನ ಉದ್ಗಾಟಿಸುವರು. ಅಲ್ಪಸಂಖ್ಯಾತರ ಕಲ್ಯಾಣ ವಸತಿ ಹಾಗೂ ವಕ್ಫ್ ಸಚಿವ ಬಿ.ಝಡ್.ಜಮೀರ್ ಅಹಮದ್‌ಖಾನ್, ಸಚಿವ ಶಿವರಾಜ್ ತಂಗಡಗಿ, ಜಿಲ್ಲೆಯ ಎಲ್ಲಾ ಶಾಸಕರುಗಳು ಸಂಸದರು ಸಮಾರಂಭದಲ್ಲಿ ಭಾಗವಹಿಸುವರು. ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‌ಸಾಬ್ ಅಧ್ಯಕ್ಷತೆ ವಹಿಸಲಿದ್ದಾರೆಂದು ಹೇಳಿದರು.
ಪಿಂಜಾರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿ ಅನುದಾನ ಬಿಡುಗಡೆಗೊಳಿಸಬೇಕು. ಪಿಂಜಾರ ಜನಾಂಗದ ಕುಲಶಾಸ್ತ್ರ ಅಧ್ಯಯನ ಮುಕ್ತಾಯದ ಹಂತದಲ್ಲಿದ್ದು, ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ರಾಜ್ಯದ ಕೆಲವು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಪ್ರವರ್ಗ-೧ ರ ಅಡಿ ಪಿಂಜಾರ ಜನಾಂಗದ ವಿದ್ಯಾರ್ಥಿಗಳಿಗೆ ಜಾತಿ ದೃಢೀಕರಣ ಪತ್ರ ನೀಡಲು ತಹಶೀಲ್ದಾರ್‌ಗಳು ಸತಾಯಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಇಲಾಖೆಯಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ನಿಗಮಗಳಲ್ಲಿ ನಮ್ಮ ಜನಾಂಗದವರಿಗೆ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಲಾಗುವುದೆಂದರು.
ನದಾಫ್/ಪಿಂಜಾರ ಸಂಘದ ಕಾರ್ಯದರ್ಶಿ ಎಂ.ಅಲ್ಲಿಪೀರ್, ಉಪಾಧ್ಯಕ್ಷ ಟಿ.ಶಫಿವುಲ್ಲಾ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಇಮಾಂಸಾಬ್, ಷೇಕ್‌ಬುಡೇನ್, ಸುಬಾನ್, ದಾದಾವಲಿ, ಕಡದರಹಳ್ಳಿ ಬಾಬು, ಮಹಮದ್ ಅಲಿ, ಆಶಾಬೇಗಂ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

