ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇಲ್ಲಿನ ಹೊರಪೇಟೆ ಬಡಾ ಮಕಾನ್ ಚಿಸ್ತಿಯಾ ಶಾದಿ ಮಹಲ್ ಹಿಂಭಾಗದಲ್ಲಿರುವ ಖಬರಸ್ಥಾನ್ ಸ್ಮಶಾನದಲ್ಲಿ ಪ್ರಾಣಿಗಳ ಮೂಳೆ, ಮಾಂಸ, ಕಸಗಳನ್ನು ತಂದು ಸುರಿಯುತ್ತಿರುವುದರಿಂದ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಶಾದಿ ಮಹಲ್‌ನ ಆಡಳಿತಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ವಾರ್ಡ್ ನಂ. ೨೭ ಕ್ಕೆ ಸೇರಿದ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿಸ್ತಿಯಾ ಶಾದಿ ಮಹಲ್ ಹತ್ತಿರ ವಾಹನಗಳ ನಿಲುಗಡೆಗೆ ಜಾಗವಿಲ್ಲ. ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಪ್ರಾಣಿಗಳ ಮಾಂಸವನ್ನು ಇಲ್ಲಿ ಹಾಕುವುದರಿಂದ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು, ಪರಿಸರ ಕಲುಷಿತಗೊಂಡಿದೆ. ಈ ಸಂಬಂಧ ಆಡಳಿತಾಧಿಕಾರಿ ಸೈಯದ್ ಜಮೀರ್‌ರವರನ್ನು ಪ್ರಶ್ನಿಸಿದರೆ ಟೆಂಡರ್ ಮೂಲಕ ಪಡೆದಿದ್ದೇನೆ. ಇದನ್ನು ಕೇಳುವ ಹಕ್ಕು ಯಾರಿಗೂ ಇಲ್ಲವೆಂದು ಉಡಾಫೆ ಉತ್ತರ ಕೊಡುತ್ತಿದ್ದಾರೆಂದು ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ದೂರಿದರು.
ಖಬರಸ್ಥಾನ ಪಕ್ಕದಲ್ಲಿಯೇ ಮಸೀದಿ, ಸೈಯದ್ ಶಾವಲಿ ದರ್ಗಾ ಕೂಡ ಇರುವುದರಿಂದ ಇಲ್ಲಿಗೆ ಬರುವ ಭಕ್ತಾಧಿಗಳು ಬೀದಿ ನಾಯಿಗಳ ಕಾಟಕ್ಕೆ ಹೆದರುವಂತಾಗಿದೆ. ಹಾಗಾಗಿ ಇತ್ತ ಗಮನ ಹರಿಸುವಂತೆ ೨೭ ನೇ ವಾರ್ಡ್‌ನ ನಾಗರೀಕರು ಒತ್ತಾಯಿಸಿದರು.
ಮಹಮದ್ ಜಬೀವುಲ್ಲಾ, ಮಹಮದ್ ಸಾಕಿಬ್, ತಾಹೀರ್, ಸೈಯದ್ ಇರ್ಫಾನ್, ವಸೀಂ, ಖಲೀಲ್, ಶಾಬಾಜ್, ಎಂ.ಡಿ.ಇಮ್ರಾನ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಹಾಜರಿದ್ದರು.

