ಚಂದ್ರವಳ್ಳಿ ನ್ಯೂಸ್, ಹಾಸನ:
ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದಲ್ಲಿ ಭಕ್ತರ ದರ್ಶನ ಕೊನೆಯಾಗಿದ್ದು, ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಗರ್ಭಗುಡಿ ಬಾಗಿಲು ಬಂದ್ ಮಾಡುವುದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ಜರುಗಿತು.
ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಸಹ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು.
ಕೆಂಡ ಹಾಯ್ದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಲತಾ ಕುಮಾರಿ ಭಕ್ತರು ಕಳಶ ಹೊತ್ತ ಕೆಂಡ ಹಾಯ್ದಿದ್ದು ನೋಡಿ ಕೆಂಡ ಹಾಯುವ ಆಸೆ ನನಗೂ ಬಂತು. ಆದರೆ ನಾನೆಂದೂ ಕೆಂಡ ಹಾಯ್ದಿರಲಿಲ್ಲ. ಮೊದಲಿಗೆ ಭಯ ಇತ್ತು. ಆದರೆ ದೇವರ ಮೇಲಿನ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ ಎಂದು ಅವರು ನಂತರ ಅನುಭವ ಹಂಚಿಕೊಂಡರು.
ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಗರ್ಭಗುಡಿಯ ಬಾಗಿಲಿಗೆ ಬೀಗಮುದ್ರೆ ಹಾಕಿ ಮುಚ್ಚಲಾಯಿತು.
ಈ ಕ್ಷಣಕ್ಕೆ ಸಾಕ್ಷಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸ್ವರೂಪ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ನಗರ ಸಭೆಯ ಮೇಯರ್ ಗಿರೀಶ್ ಚನ್ನವೀರಪ್ಪ ಸೇರಿದಂತೆ ಹಲವರ ಸಮ್ಮುಖದಲ್ಲಿ ದೇವಾಲಯದ ಶಾಸ್ತ್ರೋಕ್ತಗಳನ್ನ ನೆರವೇರಿಸಿದ ಬಳಿಕ ಅರ್ಚಕರ ವೃಂದವು ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕುವ ಮೂಲಕ ಈ ವರ್ಷದ ದರ್ಶನಕ್ಕೆ ಅಂತಿಮ ತೆರೆ ಎಳೆದರು.
ವಿಐಪಿ ದರ್ಶನಕ್ಕೆ ಈ ಬಾರಿ ಅವಕಾಶ ಸ್ವಲ್ಪ ಕಡಿಮೆ ಮಾಡಿದ್ದರಿಂದ 25 ಲಕ್ಷಕ್ಕೂ ಹೆಚ್ಚು ಮಂದಿ ದೇವಿಯ ದರ್ಶನ ಪಡೆದರು. ಕಳೆದ ಬಾರಿ 17 ಲಕ್ಷ ಮಂದಿ ದರ್ಶನ ಮಾಡುವ ಮೂಲಕ ಸುಮಾರು 12 ಕೋಟಿ ಲಾಭಗಳಿಸಿದ್ದ ಹಾಸನಾಂಬೆ ಈ ಬಾರಿ 22.5 ಕೋಟಿ ಆದಾಯ ಬಂದಿದೆ. ಕಳೆದ ವಾರ 5 ದಿನಗಳಲ್ಲಿ ತಿರುಪತಿಗೆ ದರ್ಶನ ನೀಡಿದ ಭಕ್ತರನ್ನು ಮೀರಿಸುವ ಮೂಲಕ ಹೊಸ ಇತಿಹಾಸವನ್ನು ಹಾಸನಂಬೆ ಬರೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಈ ಬಾರಿ ನಡೆದ ಹಾಸನಾಂಬೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆದಿದೆ. ಒಬ್ಬ ಸಾಮಾನ್ಯ ಅಧಿಕಾರಿ ಮಾಡುವಂತಹ ಕೆಲಸವನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ನಿಂತು ನಿರ್ವಹಣೆ ಮಾಡಿ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಮಧ್ಯಾಹ್ನ 1.06 ನಿಮಿಷಕ್ಕೆ ಬಾಗಿಲು ಹಾಕುವ ಮೂಲಕ ದೇವಿಯ ಅಂತಿಮ ದರ್ಶನಕ್ಕೆ ತೆರೆ ಬಿದ್ದಿದೆ. ಮುಂದಿನ ವರ್ಷ 11 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ಕೊಡುವ ಹಾಸನಾಂಬೆ ಅಕ್ಟೋಬರ್-29 ರಿಂದ ವಿದ್ಯುಕ್ತವಾಗಿ ಬಾಗಿಲನ್ನು ತೆರೆಯಲಿದೆ.
ಹಾಸನಾಂಬೆ ಜಾತ್ರಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜಿಲ್ಲೆಯ ಗೌರವ ಹೆಚ್ಚಾಗಿದೆ. ಹಾಸನಾಂಬೆಯ ದರ್ಶನಕ್ಕೆ ಬಂದ ಭಕ್ತರೂ ಸಂತೋಷವಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಾಂಬೆ ದರ್ಶನಕ್ಕೆ ಬಂದಿದ್ದಾಗಲೂ ಸಾರ್ವಜನಿಕರ ದರ್ಶನ ನಿಂತಿಲ್ಲ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದಾಗಿ ಹಾಸನಾಂಬೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ ಎಂದು ಸಚಿವ ಕೃಷ್ಣಭೈರೇಗೌಡರು ಹರ್ಷ ವ್ಯಕ್ತಪಡಿಸಿದರು.

