ಹೊತ್ತಿ ಉರಿದ ವೋಲ್ವೋ ಬಸ್, 21 ಮಂದಿ ಮರಣ, ಹಲವರು ಗಾಯ
ಚಂದ್ರವಳ್ಳಿ ನ್ಯೂಸ್, ಕರ್ನೂಲ್:
ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ವೋಲ್ವೋ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿ ಬೆಂಕಿ ಆವರಿಸಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಹಾಗೂ ಮನೀಶ್ (12) ಎಂದು ಗುರುತಿಸಲಾಗಿದೆ.
ಬಸ್ ನಲ್ಲಿ ನಿದ್ರೆಯ ಮಂಪರಿನಲ್ಲಿದ್ದ ನತದೃಷ್ಟ ಕುಟುಂಬ ಚಿರನಿದ್ರೆಗೆ ಜಾರಿದೆ. ಕರ್ನೂಲ್ ಬಸ್ ದುರಂತ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಈ ದುರಂತ ನಡೆದಿದೆ. ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಘಟನೆ ಬಗ್ಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾಣ ಕಳೆದುಕೊಂಡಿರುವವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ.

ಬಸ್ ಸುಟ್ಟು ಕರಕಲು:
ಆಂಧ್ರ ಪ್ರದೇಶದ ಕರ್ನೂಲ್ ಸಮೀಪ ಅಗ್ನಿ ದುರಂತದಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯ ಸಾಫ್ಟ್ವೇರ್ ಎಂಜಿನಿಯರ್ ಮೇಘನಾಥ್(24) ಮೃತರಾಗಿದ್ದು, ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ಮೇಘನಾಥ್ ಮರಳಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.
ಮೃತ ಮೇಘನಾಥ್ ಅವರು ಸುಶೀಲಾ ಮತ್ತು ಭಾಸ್ಕರಾಚಾರಿ ದಂಪತಿಯ ಏಕೈಕ ಪುತ್ರನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇರುವ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ.
ಈ ವೇಳೆ ಕೆಲವರು ಹೊರಹಾರಿ ಪ್ರಾಣ ಉಳಿಸಿಕೊಂಡಿದ್ದರೆ ಹಲವರು ಬೆಂಕಿ ಕೆನ್ನಾಲೆಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿ ಅನುಷಾ ಕೂಡ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯಾದಾದ್ರಿಯ ನಿವಾಸಿಯಾಗಿದ್ದ ಅನುಷಾ, ದೀಪಾವಳಿ ಹಬ್ಬಕ್ಕಾಗಿ ತಮ್ಮ ಊರಿಗೆ ಹೋಗಲು ಹೈದರಾಬಾದ್ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಅನುಷಾ, ಈ ಘಟನೆಯಿಂದ ಸಾವನ್ನಪ್ಪಿರುವುದು ದುರದೃಷ್ಟಕರ. ಈ ಬಸ್ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಯುವಕರಾಗಿದ್ದರು ಎಂದು ತಿಳಿದು ಬಂದಿದೆ. ಈ ದುರಂತ ಅವರ ಎಲ್ಲಾ ಕನಸುಗಳನ್ನು ಬೂದಿ ಮಾಡಿದೆ. ಬೆಂಗಳೂರು ತಲುಪುವ ಬದಲು, ಸ್ಮಾಶನ ಸೇರುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ.
ಗಣ್ಯರ ಸಂತಾಪ- ಬಸ್ ದುರಂತ ಘಟನೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮತ್ತಿತರ ರಾಜಕೀಯ ಪಕ್ಷಗಳ ಸಂತಾಪ ವ್ಯಕ್ತಪಡಿಸಿದ್ದು, ಬಸ್ಗೆ ಬೆಂಕಿ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು.
ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

