ಚಂದ್ರವಳ್ಳಿ ನ್ಯೂಸ್, ರಾಮನಗರ :
ರಾಜ್ಯ ಸರ್ಕಾರ ಬಿ ಮತ್ತು ಎ ಖಾತಾ ಪರಿವರ್ತನೆ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಈ ಮೂಲಕ ಸರ್ಕಾರ ಹಗಲು ದರೋಡೆ ದಂಧೆ ಮಾಡುತ್ತಿದ್ದಾರೆ ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಖಾತಾ ಪರಿವರ್ತನೆ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆದು ಒಂದು ಲಕ್ಷ ಕೋಟಿ ರೂಪಾಯಿ ಆದಾಯ ತರಲು ಡಿ ಕೆ ಶಿವಕುಮಾರ್ ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ ನಿಖಿಲ್, ಜನರಿಗೆ ಒಳ್ಳೆಯದು ಮಾಡಬೇಕೆಂದರೆ ಅವತ್ತಿನ ಎಸ್ಆರ್ ವ್ಯಾಲ್ಯೂ ಮೇಲೆ ದರ ಫಿಕ್ಸ್ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಬೆಂಗಳೂರಲ್ಲಿ 7.5 ಲಕ್ಷ ಮನೆಗಳು ಇದಕ್ಕೆ ಒಳಪಡ್ತವೆ. ಅದಕ್ಕೆ 100 ದಿನ ಟೈಂ ಲೈನ್ ಫಿಕ್ಸ್ ಮಾಡಿದ್ದಾರೆ. ಖಾತೆ ವರ್ಗಾವಣೆಗೆ ಒಂದೊಂದು ಕಡೆ ಒಂದೊಂದು ಎಸ್ಆರ್ ವ್ಯಾಲ್ಯೂ ಇದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಜನರಿಗೆ ಒತ್ತಡ ಹೇರಿ ಅವರ ಬಳಿ ಹಣ ಕಸಿದು ಅವರಿಗೆ ಗ್ಯಾರಂಟಿ ರೂಪದಲ್ಲಿ ವಾಪಸ್ ಕೊಡ್ತಾವ್ರೆ ಎಂದು ನಿಖಿಲ್ ಟೀಕಾಪ್ರಹಾರ ಮಾಡಿದರು.
ಕುಮಾರಸ್ವಾಮಿ ಖಾಲಿ ಟ್ರಂಕ್ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನಿಖಿಲ್ ಮಾತನಾಡಿ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ರಾಜ್ಯಕ್ಕೆ ನೀಡಿದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿದೆ. ಕುಮಾರಣ್ಣ ಅವರ ಕಾಲಘಟ್ಟದಲ್ಲಿ ಏನೇನು ಮಾಡಿದ್ದಾರೆ ಅಂತ ರಾಜ್ಯದ ಜನತೆಗೆ ಗೊತ್ತು. ಅಧಿಕಾರದಲ್ಲಿದ್ದಾಗ ಕೊಟ್ಟಂತ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ. ಅದನ್ನು ಚುನಾವಣೆ ಸಂದರ್ಭದಲ್ಲಿ ಏನೆಲ್ಲಾ ಮಾಡಿದ್ದಾರೆ ಎಂದು ಮಾತನಾಡ್ತೀವಿ ಎಂದು ಡಿ.ಕೆ ಶಿವಕುಮಾರ್ ಅವರಿಗೆ ನಿಖಿಲ್ ತಿರುಗೇಟು ನೀಡಿದರು.
ಡಿಕೆಶಿ ಜ್ಯೋತಿಷಿನಾ?–
ಜೆಡಿಎಸ್ ಪಕ್ಷ ರಾಜ್ಯದಲ್ಲಿ 8 ರಿಂದ 9 ಸ್ಥಾನಕ್ಕೆ ಕುಸಿಯುತ್ತೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಈ ರಾಜ್ಯದ ಜನ ಜೆಡಿಎಸ್ ಪಕ್ಷದ ಭವಿಷ್ಯ ತೀರ್ಮಾನ ಮಾಡ್ತಾರೆ. ಭವಿಷ್ಯ ಹೇಳೋಕೆ ಅವರೇನು ಜ್ಯೋತಿಷಿನಾ.? ಅವರು ಭವಿಷ್ಯ ನುಡಿಯಲಿ, ಟೈಂ ಬಂದಾಗ ಮಾತಾಡ್ತೀವಿ ಎಂದು ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ಶಾಸಕರಿಗೆ 50 ಕೋಟಿ ಅನುದಾನ ಕೊಡ್ತೀವಿ ಅಂತ ಹೇಳಿ ಕೊಟ್ಟಿಲ್ಲ. ಒಬ್ಬ ಶಾಸಕನಿಗೆ 10 ಕೋಟಿ ಅನುದಾನವೂ ಸಿಕ್ಕಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಶೂನ್ಯ. ಬಿಜೆಪಿ-ಜೆಡಿಎಸ್ ಬಿಡಿ ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಅಂತ ಹೇಳ್ತಾರೆ. ಕಂಟ್ರಾಕ್ಟರ್ಗಳ ಕಥೆ ಏನಾಗಿದೆ?. ಅವರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲಘಟ್ಟದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂದು ನಿಖಿಲ್ ಕಿಡಿಕಾರಿದರು.
ಸಿಎಂ-ಡಿಸಿಎಂ ಇವರ ಕುರ್ಚಿ ಕಿತ್ತಾಟದ ನಡುವೆ ರಾಜ್ಯದ ಜನ ಬಲಿಪಶು ಆಗ್ತಿದ್ದಾರೆ. ನವೆಂಬರ್ ಕ್ರಾಂತಿ ಅಂತ ಮಾತಾಡ್ತಾರೆ. ಅದೇನು ಕ್ರಾಂತಿ ಮಾಡ್ತಾರೋ ನೋಡೋಣ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು.

