ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಶೈಕ್ಷಣಿಕ ಬೆಳವಣಿಗೆಯಲ್ಲಿ ತನ್ನದೇಯಾದ ವಿಶೇಷ ಮೌಲ್ಯಹೊಂದಿದೆ. ಈಗಾಗಲೇ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ತಾಲ್ಲೂಕು ಶೈಕ್ಷಣಿಕ ಅಭಿವೃದ್ದಿಯಲ್ಲಿ ದಾಪುಗಾಲಿಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ವೃತ್ತಿಪರ ಕೋರ್ಸ್‌ಗಳಾದ ಜಿಟಿಟಿಸಿ, ಇಂಜಿನಿಯರಿಂಗ್ ಕಾಲೇಜು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಮಹತ್ವದ ಫಲ ಇಂದು ನಾವು ಕಾಣಲು ಆರಂಭಿಸಿದ್ದೇವೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ತಾಲ್ಲೂಕಿನಹುಲಿಕುಂಟೆ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ತನ್ನ ಶತಮಾನೋತ್ಸವ ಸಮಾರಂಭದ ಹತ್ತಿರಲಿದ್ದು ಸಮಾರಂಭವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಬಗ್ಗೆ ಶಾಸಕ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿಸಭೆಗೆ ಚಾಲನೆ ನೀಡಿ ಮಾತನಾಡಿದರು.
ಚಳ್ಳಕೆರೆ ಕ್ಷೇತ್ರದಲ್ಲಿ ನೂರು ವರ್ಷಗಳ ಪೂರೈಸಿದ ಅನೇಕ ಶಾಲೆಗಳಿದ್ದು, ಎಲ್ಲವೂ ಸರ್ಕಾರಿಶಾಲೆಗಳಾಗಿವೆ ಎಂಬ ಹೆಗ್ಗಳಿಕೆ ನಮ್ಮದು. ನೂರು ವರ್ಷಗಳ ಹಿಂದೆ ಶಿಕ್ಷಣದ ಇತಿಮಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾದ ದಿನಗಳಲ್ಲಿ ಶಿಕ್ಷಣ ಈ ಕ್ಷೇತ್ರದಲ್ಲಿ ಮುಂದುವರೆದಿದೆ.

ಅದಕ್ಕೆ ಪೂರಕವೆಂಬಂತೆ ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರವೂ ಸಹ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಶಾಲೆಯ ಶತಮಾನೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಸಿದ್ದತೆಗಳು ಹಮ್ಮಿಕೊಳ್ಳುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಶಾಲೆಯ ಶಿಕ್ಷಕ ವೃಂದಕ್ಕೆ ತಿಳಿಸಿದರು. ಸಭೆಯಲ್ಲಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಪಡೆದ ಹಲವಾರು ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಗಿರಿಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಂ.ರವೀಶ್, ಹಿರಿಯ ರಾಜಕಾರಿಣಿ ಕೆ.ಟಿ.ನಿಜಲಿಂಗಪ್ಪ, ಎಂ.ಜಯಣ್ಣ, ತಿಪ್ಪೇಸ್ವಾಮಿ, ಶಿವಣ್ಣ, ಎಂ.ರಾಮಚಂದ್ರಪ್ಪ, ಎಸ್.ವಿ.ಮಧು, ಬೋರಣ್ಣ ಮುಂತಾದವರು ಶಾಲೆಯಲ್ಲಿ ಅಭ್ಯಾಸ ಮಾಡಿದ ದಿನಗಳು ಮತ್ತು ಅಂದು ಶಿಕ್ಷಕರು ನೀಡಿದ ಕಠಿಣ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂದಿನ ನಮ್ಮ ಶಿಕ್ಷಕರ ಪರಿಶ್ರಮ ಇಂದು ನಮ್ಮ ಬದುಕನ್ನು ಪುನೀತಗೊಳಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಶಿಕ್ಷಣ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ತನ್ನದೇಯಾದ ಮೈಲಿಗಲ್ಲನ್ನು ಸ್ಥಾಪನೆ ಮಾಡಲು ಹೊರಟಿದೆ. ತಾಲ್ಲೂಕಿನ ಕೆಲವೇ ಶಾಲೆಗಳು ಮಾತ್ರ ಶತಮಾನೋತ್ಸವ ಸಮಾರಂಭವನ್ನು ಆಚರಿಸುವ ಹಂತಕ್ಕೆ ಬಂದಿವೆ. ವಿಶೇಷವಾಗಿ ಹುಲಿಕುಂಟೆಗ್ರಾಮದ ಈ ಶಾಲೆಯೂ ನೂರು ವರ್ಷಗಳ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಚರಣೆ ಮಾಡಲು ಇಲಾಖೆಯೊಂದಿಗೆ ಕೈಜೋಡಿಸಿ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೇವಿದ್ಯಾರ್ಥಿಗಳು ಹೆಚ್ಚುವರಿಯಾಗಿ ೬ ಕೊಠಡಿ ನಿರ್ಮಾಣ, ಬೋಜನ ಶಾಲೆ, ಕಂಪ್ಯೂಟರ್, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ತಮ್ಮ ಅನುದಾನದಲ್ಲಿ ಎಲ್ಲಾ ಸೌಲಭ್ಯಗಳನ್ನು ಪೂರೈಸುವ ಭರವಸೆ ನೀಡಿದರು.
ಮುಖ್ಯ ಶಿಕ್ಷಕಿ ಕಮಲಮ್ಮ, ಶಿಕ್ಷಕರಾದ ವೀರೇಶ್, ಗ್ರಾಪಂ ಸದಸ್ಯರಾದ ವೀರೇಶ್, ರಂಗಸ್ವಾಮಿ, ಮಧುಕುಮಾರ್, ಲಲಿತಮ್ಮ, ಮಧುಕುಮಾರ್, ದೇವರಾಜ್, ತಿಪ್ಪಕ್ಕ, ಕರಿಯಜ್ಜ, ಓ.ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

