ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾನೂನು ತಿದ್ದುಪಡಿಯಿಂದ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುವುದಿಲ್ಲ ಎಂದು ಕಳೆದ ಮಾರ್ಚ್ ತಿಂಗಳಿನಲ್ಲಿ ಸದನದಲ್ಲಿ ನಾನು ಹೇಳಿದ್ದ ಮಾತು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರು ರೈತನ ಮನೆಗೆ ಬೀಗ ಜಡಿದು ಜಪ್ತಿ ಮಾಡಿರುವ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ ಹಾವಳಿಯಿಂದ ರೈತರು, ಕೃಷಿ ಕಾರ್ಮಿಕರು, ಬಡವರನ್ನು ರಕ್ಷಿಸುವಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಶೋಕ್ ಅವರು ದೂರಿದ್ದಾರೆ.
ಕಾನೂನು ತಿದ್ದುಪಡಿಯಿಂದ ಈ ಹಾವಳಿ ನಿಲ್ಲುವುದಿಲ್ಲ, ನಿಗಮ ಮಂಡಳಿಗಳಿಗೆ ಅನುದಾನ ನೀಡಿ ಅದರ ಮೂಲಕ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಾದರೆ ಮಾತ್ರ ಈ ಹಾವಳಿ ನಿಲ್ಲುತ್ತದೆ ಎಂದು ಸದನದಲ್ಲಿ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಅಶೋಕ್ ದೂರಿದ್ದಾರೆ.

