ನೂರು ಕಾನೂನುಗಳು-ನೂರು ಅಭಿಮತಗಳು ಸಂಪುಟ ಲೋಕಾರ್ಪಣೆ ಮಾಡಿದ ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾನೂನು ರೂಪಿಸುವುದು ಜನರ ಸಮಸ್ಯೆಗಳನ್ನು ಬಗೆಹರಿಸಲು, ಆದರೆ ಕಾನೂನುಗಳು ಜನಪರವಾಗಿವೆಯೇ? ಇಲ್ಲವೇ? ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಣೆ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ “ನೂರು ಕಾನೂನುಗಳು – ನೂರು ಅಭಿಮತಗಳು” ಮೂರು ಸಂಪುಟಗಳ ಲೋಕಾರ್ಪಣೆ ಹಾಗೂ ಕಾನೂನು ಸಂಶೋಧಕರು, ತಜ್ಞರು ರಚಿಸಿದ 105 ಕರಡು ಮಾದರಿ ಮಸೂದೆಗಳನ್ನು ಲೋಕಾರ್ಪಣೆಗೊಳಿಸಿ – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

- Advertisement - 

ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್ ಕೆ ಪಾಟೀಲ್ ಅವರು ಕಾನೂನು ರಚನೆಯ ಕುರಿತಾದ ಸಂಪುಟಗಳ ಪ್ರಕಟಣೆಗೆ ಇಂಬು ನೀಡಿ ಉತ್ತಮವಾಗಿ  ಕಾರ್ಯ ನಿರ್ವಹಿಸಿದ್ದಾರೆ.

ಎಚ್ ಕೆ ಪಾಟೀಲ್ ಅವರ ಮುಂದಾಳತ್ವದಲ್ಲಿ ಸುಮಾರು ನೂರು ಕಾನೂನುಗಳನ್ನು ಮಾಡಿ ಅದಕ್ಕೆ ಪರಿಣತರಿಂದ, ವಿದ್ವಾಂಸರುಗಳಿಂದ ಅಭಿಮತವನ್ನು ಪಡೆಯಲಾಗಿದೆ. ಇದೊಂದು ಪ್ರಶಂಸನೀಯ ಕಾರ್ಯ. ನಾವು ರೂಪಿಸುವ ಕಾನೂನುಗಳು ಜನಪರವಾಗಿದ್ದು, ಸಮಾಜಮುಖಿಯಾಗಿರಬೇಕು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾನೂನುಗಳಿರಬೇಕು. ಕಾನೂನುಗಳು ಸಮರ್ಪಕವಾಗಿ ಜಾರಿ ಆಗುತ್ತಿವೆಯೋ? ಇಲ್ಲವೋ? ಗಮನಿಸಿಕೊಳ್ಳಬೇಕಾಗಿರುವುದೂ ಕೂಡಾ ಅಷ್ಟೇ ಮುಖ್ಯ.

- Advertisement - 

ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು, ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಲು ಮೌಢ್ಯ ಪ್ರತಿಬಂಧಕಾಜ್ಞೆ ಕಾನೂನು ಮಾಡಿದ್ದೆವು. ಆದರೆ ಆ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿ ಆಗದೇ ಹೋದದ್ದು ವಿಷಾದನೀಯ ಎಂದು ಸಿಎಂ ತಿಳಿಸಿದರು.

ವಿದ್ಯಾವಂತರೂ ಕೂಡಾ ಕೆಲವೊಮ್ಮೆ ಮೌಢ್ಯಗಳ ಆಚರಣೆಯಲ್ಲಿ ತೊಡಗುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಡಾಕ್ಟರೇಟ್ ಪದವಿ ಪಡೆದವರೂ ಮೌಢ್ಯದ ಆಚರಣೆ ಮಾಡಿದರೆ ಆಗುವ ಪ್ರಯೋಜನವಾದರೂ ಏನು? ಇದನ್ನೆಲ್ಲ ಮೀರಿ ಬೆಳೆದರೆ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಕಾನೂನುಗಳ ಸಂರಕ್ಷಣೆಯೂ ಆಗುತ್ತದೆ. 

ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ನೂರು ಕಾನೂನುಗಳನ್ನು ಮಾಡಿದ್ದೇವೆ. ಕಳೆದ ಅಧಿವೇಶನದಲ್ಲಿ 39 ಕಾನೂನುಗಳನ್ನು ರೂಪಿಸಲಾಯಿತು. ಅವನ್ನೆಲ್ಲ  ರಚಿಸಿದ್ದು ಸಮಸ್ಯೆಗಳ ಪರಿಹಾರಕ್ಕೆ, ಆದರೆ ಸಮಸ್ಯೆಗಳೇ ಪರಿಹಾರ ಆಗದಿದ್ದರೆ ಕಾನೂನುಗಳನ್ನು ಏಕೆ  ರಚಿಸಬೇಕು? ಇದೊಂದು ಗಂಭೀರವಾಗಿ ಯೋಚಿಸಬೇಕಿರುವ ವಿಷಯ.

ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂದು ಕಾನೂನು ಮಾಡಿಕೊಂಡಿದ್ದೇವೆ. ಆದರೆ ಅದರ ಪರಿಪಾಲನೆ ಆಗುತ್ತಿದೆಯೇ? ಇದಕ್ಕೆ ಯಾರು ಹೊಣೆ? ಅಭಿಮತ ವ್ಯಕ್ತಪಡಿಸಿರುವ ಎಲ್ಲಾ ವಿದ್ವಾಂಸರಿಗೆ ಧನ್ಯವಾದಗಳನ್ನು ಸಿದ್ದರಾಮಯ್ಯ ತಿಳಿಸಿದರು.

 

Share This Article
error: Content is protected !!
";