ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಆಡದೇ ಮಾಡುವವನು ರೂಢಿಯೊಳಗುತ್ತಮನು ಆಡಿ ಮಾಡುವವನು ಮಧ್ಯಮನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಆಡಿಯೂ ಮಾಡದವನು ಅಧಮನು”. ಈ ಮಾತು ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ನಿಖರವಾಗಿ ಅನ್ವಯವಾಗುತ್ತದೆ. ಮತ ಬ್ಯಾಂಕ್ ರಾಜಕಾರಣ, ಚುನಾವಣಾ ಸಂದರ್ಭಗಳಲ್ಲಿ ಸುಳ್ಳು ಭರವಸೆ, ಅಪಪ್ರಚಾರಗಳು ಕಾಂಗ್ರೆಸ್ ಪಕ್ಷದ ಬತ್ತಳಿಕೆಯ ಅಸ್ತ್ರಗಳು.
ಕಳೆದ ಚುನಾವಣೆಯಲ್ಲಿ ನೀಡಿದ್ದ 134 ಭರವಸೆಗಳಲ್ಲಿ ಈವರೆವಿಗೂ ಪೂರೈಸಿರುವುದು ಕೇವಲ 9 ಮಾತ್ರ ಎನ್ನುವುದನ್ನು ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್ ರಘುನಂದನ್ ನೇತೃತ್ವದ ಸಿವಿಕ್ ಸಂಘಟನೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ, ಜನಸಾಮಾನ್ಯರ ಮೇಲೆ ನಿರಂತರ ತೆರಿಗೆ ಹೊರೆ ಹೇರಲಾಗುತ್ತಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, ಭ್ರಷ್ಟಾಚಾರದ ವ್ಯಾಪ್ತಿ ಎಲ್ಲೆ ಮೀರಿ ಬಕಾಸುರನಂತೆ ವ್ಯವಸ್ಥೆಯನ್ನು ಆಪೋಶನ ಮಾಡಿಕೊಂಡಿದೆ ಎಂದು ಈ ಮೊದಲಿನಿಂದಲೂ ನಾವು ಆರೋಪಿಸುತ್ತಲೇ ಇದ್ದೆವು. ಅದು ಹೌದು ಎಂಬುದನ್ನು ಸಿವಿಕ್ ಸಂಘಟನೆಯ ವರದಿ ಸಾಕ್ಷೀಕರಿಸಿದೆ ಎಂದು ವಿಜಯೇಂದ್ರ ದೂರಿದರು.
ಪಂಚ ಗ್ಯಾರಂಟಿಗಳ ಹೆಸರನ್ನು ಮುಂದು ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ, ಒಂದು ಕೈಯಲ್ಲಿ ಕೊಟ್ಟು ಹತ್ತಾರು ಕೈಗಳಿಂದ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ. ರಾಜ್ಯದ ಅಭಿವೃದ್ಧಿಯನ್ನು ತುಕ್ಕು ಹಿಡಿಸಿದೆ.
ಈ ಸರ್ಕಾರ ಅಧಿಕಾರಕ್ಕೆ ಬರಲು ಜನತೆಗೆ ನೀಡಿದ ಆಶಯವನ್ನು ಈಡೇರಿಸುವಲ್ಲಿ ಬಹುತೇಕ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿಸಿಕೊಂಡಿದೆ ? ಎನ್ನುವುದನ್ನು ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಿಳಿಸಬೇಕಿದೆ.
ಮುಖ್ಯಮಂತ್ರಿ ಗಾದಿಗಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ತನ್ನ ಸರ್ಕಾರದ ಅವಧಿಯನ್ನೇನಾದರೂ ಪೂರೈಸಿಬಿಟ್ಟರೆ ಈ ರಾಜ್ಯವನ್ನು ದೇವರೇ ಕಾಪಾಡಬೇಕಾದ ಸ್ಥಿತಿ ಬಂದೊದಗಲಿದೆ ಎಂದು ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

