ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿಗೆ ಪ್ರಸ್ತುತ ದೇಶದಲ್ಲಿ ಕಂಟಕ ಎದುರಾಗಿದ್ದು, ಎಲ್ಲೆಡೆಯೂ ಮತಗಳ್ಳತನ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.
ಕಾಂಗ್ರೆಸ್ ಪಕ್ಷದಿಂದ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವೋಟ್ ಚೌರ್ ಗದ್ದಿ ಜೋಡ್ ಮತಗಳ್ಳತನ ವಿರುದ್ಧ ಸಹಿ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಸರ್ವರ ಹಕ್ಕು. ಆದರೆ, ಜಾತಿ-ಧರ್ಮ ಆಧಾರಿತವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವುದು, ನಕಲಿ ಹೆಸರು ಸೇರ್ಪಡೆ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಷಡ್ಯಂತರ ನಡೆಸಲಾಗುತ್ತಿದೆ ಎಂದು ದೂರಿದರು.
ಸಂವಿಧಾನ ವಿರೋಧಿ ಹಾಗೂ ಅಕ್ರಮ ನಡೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ೧೦ ವರ್ಷಕ್ಕೂ ಹೆಚ್ಚು ಕಾಲದಿಂದ ಗುಪ್ತವಾಗಿ ನಡೆಸುತ್ತಿಕೊಂಡು ಬರುತ್ತಿರುವ ಈ ದುಷ್ಕೃತ್ಯವನ್ನು ಬೆಳಕಿಗೆ ತಂದ ಕೀರ್ತಿ ರಾಹುಲ್ ಗಾಂಧಿಗೆ ಸಲ್ಲುತ್ತದೆ ಎಂದರು.
ಸಂವಿಧಾನ ಹಾಗೂ ಮತದಾರರ ಹಕ್ಕು ರಕ್ಷಣೆಗೆ ಟೊಂಕ ಕಟ್ಟಿ ದೇಶಾದ್ಯಂತ ಸಂಚರಿಸುತ್ತಿರುವ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ನಿಜವಾದ ರಕ್ಷಕರಾಗಿದ್ದಾರೆ. ಭಯ, ಭೀತಿ ಸೇರಿ ವಿವಿಧ ರೀತಿ ಬೆದರಿಕೆ ಹಾಕಿದರೂ ಭಾರತೀಯರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಮತಗಳ್ಳತನ ಖಂಡಿಸಿ ರಾಷ್ಟ್ರ ವ್ಯಾಪಿ ವೋಟ್ ಚೌರಿ ಅಭಿಯಾನ ಹಮ್ಮಿಕೊಂಡು, ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಆಳುವ ಸರ್ಕಾರದ ತಪ್ಪು, ಷಡ್ಯಂತರಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ದೇಶದ ಬಹುತೇಕ ಪಕ್ಷಗಳು, ಸಂಘಟನೆಗಳು ಬೆಂಬಲಿಸಿ, ಚಳವಳಿಯಲ್ಲಿ ಹೆಜ್ಜೆ ಹಾಕುತ್ತಿವೆ ಎಂದರು.
ರಾಹುಲ್ ಗಾಂಧಿ ಹೋರಾಟ ಬೆಂಬಲಿಸುವ ಜೊತೆಗೆ ಮತದಾರರ ಪರಿಷ್ಕೃತ ಪಟ್ಟಿಯತ್ತ ಸದಾ ಕಣ್ಣಾಯಿಸುವುದು, ಪರೀಕ್ಷರಣೆ ವೇಳೆ ಹೆಸರು ಕೈಬಿಟ್ಟು ಹೋಗದಂತೆ, ಕಳ್ಳ ಮತಗಳು ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಮೂಲಕ ರಾಹುಲ್ ಹೋರಾಟಕ್ಕೆ ಗೆಲುವು ತಂದುಕೊಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಪ್ರತಿ ವ್ಯಕ್ತಿಯ ಮತದಾನದ ಹಕ್ಕು ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದ ಮುಂದಿರುವ ಬಹುದೊಡ್ಡ ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಮುಂಬರುವ ದಿನಗಳಲ್ಲಿ ಕಳ್ಳದಾರಿಯಲ್ಲಿ ಅಧಿಕಾರ ಹಿಡಿಯುವ ಕೆಟ್ಟನಡೆಗೆ ತಡೆ ಹಾಕಬೇಕು ಎಂದರು.
ಸಂವಿಧಾನ ಕರಡು ಸಮಿತಿ ರಚಿಸಿ, ಬಹುದೊಡ್ಡ ಸಂವಿಧಾನ ಕೊಡುಗೆ ಕೊಡುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ಸಂವಿಧಾನಕ್ಕೆ ಕಂಟಕ ಎದುರಾಗಿದ್ದು, ಅದರ ವಿರುದ್ಧ ಹೋರಾಟ ನಡೆಸಿ ದೇಶವನ್ನು ರಕ್ಷಿಸುವುದು ನಮ್ಮಗಳ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಚಳವಳಿಯೊಂದಿಗೆ ಹೆಜ್ಜೆ ಹಾಕಬೇಕು. ಎಲ್ಲೆಡೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಅನೇಕ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ತನ್ನ ಕಪಿಮುಷ್ಠಿಗೆ ತೆಗೆದುಕೊಂಡು ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ದುಷ್ಕೃತ್ಯಕ್ಕೆ ಕೈ ಹಾಕಿದೆ. ಇದರ ವಿರುದ್ಧ ನಾವೆಲ್ಲರೂ ಚಳವಳಿ ನಡೆಸಿ ಮಟ್ಟಹಾಕಬೇಕು. ನೈಜ ಮತದಾರರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ಒತ್ತಡ ತರಬೇಕು. ಆಗ ಮಾತ್ರ ನ್ಯಾಯಸಮ್ಮತ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಪವನ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್ ಶಿವಪುರ, ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ಮುಖಂಡರಾದ ಗೋಡೆಮನೆ ಹನುಮಂತಪ್ಪ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನಕುಮಾರ್ ಬೋರೇನಹಳ್ಳಿ, ಮಾಜಿ ಅಧ್ಯಕ್ಷ ರಂಗಸ್ವಾಮಿ ಗಂಗಸಮುದ್ರ, ಕೆ.ಸಿ.ರಮೇಶ್, ಆಲೀಂ ಉಲ್ಲಾ ಖಾನ್, ಎಚ್.ಟಿ.ಹನುಮಂತಪ್ಪ ಇತರರಿದ್ದರು.
ಭರಮಸಾಗರದಲ್ಲೂ ಆಯೋಜಿಸಲಾಗಿತ್ತು. ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ, ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅಳಗವಾಡಿ, ಮಾಜಿ ಅಧ್ಯಕ್ಷ ದುರುಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್ ಇತರರಿದ್ದರು.

