ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿಯನ್ನು ರಕ್ಷಣೆ ಮಾಡಲು ಮುಂದಾದ ಐವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ಸಂಭವಿಸಿದೆ.
ಈಗಾಗಲೇ ಇಬ್ಬರು ಬಾಲಕಿಯರ ಮೃತದೇಹಗಳು ಪತ್ತೆಯಾಗಿದ್ದು ಇನ್ನಿಬ್ಬರು ಬಾಲಕಿಯರ ಮೃದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ನೀರಿನಲ್ಲಿ ಮುಳುಗಿದ್ದ ಓರ್ವ ಬಾಲಕಿ ಹಾಗೂ ಓರ್ವ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕಿ ಆಫ್ರಿನ್ (13) ಮೃತಪಟ್ಟಿದ್ದಾಳೆ. ಆಯಿಷಾ ಮೃತದೇಹ ಸಿಕ್ಕಿದ್ದು, ಹನಿ (14) ಮೃತದೇಹ ಭಾನುವಾರ ಪತ್ತೆಯಾಗಿದೆ.
ನಾಪತ್ತೆಯಾಗಿರುವ ಆಲ್ಫಿಯಾ ಹಾಗೂ ಥರ್ಬಿಮ್ (13)ಗಾಗಿ ಹುಡುಕಾಟ ನಡೆದಿದೆ. ನೀರುಪಾಲಾಗಿರುವ ಆ ಮಕ್ಕಳ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಏನಿದು ಘಟನೆ:
ಮೈಸೂರಿನ ಶಾಂತಿನಗರದ ಮದರಸದಿಂದ 15 ಮಕ್ಕಳು ಹಾಗೂ ಮೂವರು ಸಿಬ್ಬಂದಿ ಪ್ರವಾಸಕ್ಕೆಂದು ಬಂದಿದ್ದು ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಬಳಿಯ ನಾಲೆಯಲ್ಲಿ ಈ ಅವಘಡ ಸಂಭವಿಸಿದೆ. ಮಕ್ಕಳು ನಾಲೆಯಲ್ಲಿ ಇಳಿದು ಆಟವಾಡಲು ಮುಂದಾಗಿದ್ದರು. ಈ ವೇಳೆ ನೀರಿನ ರಭಸಕ್ಕೆ ಮಕ್ಕಳು ಕೊಚ್ಚಿ ಹೋಗಿದ್ದಾರೆ.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಓರ್ವ ಬಾಲಕಿ ಹಾಗೂ ಬಾಲಕನನ್ನು ರಕ್ಷಣೆ ಮಾಡಿ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಓರ್ವ ಬಾಲಕಿ ಸಾವನಪ್ಪಿದ್ದಾಳೆ. ಬಾಲಕ ಮಹಮ್ಮದ್ ಗೌಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

