ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್ ಅವರು ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಪಾಲವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಎನ್ ಡಿಎ ಮೈತ್ರಿ ಕೂಟಕ್ಕೆ ಭರ್ಜರಿ ಜಯ ದೊರೆತಿದೆ.
ಪಾಲವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೋವೇರಹಟ್ಟಿ ರವಿ ವರ್ಮ, ಉಪಾಧ್ಯಕ್ಷರಾಗಿ ಪಾಲವ್ವನಹಳ್ಳಿ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಿಗೆ ದಿನೇಶ್ ಸೂಚಕರಾಗಿ, ಕೆ.ದ್ಯಾಮೇಗೌಡ ಅನುಮೋದಕರಾಗಿದ್ದರು. ಉಪಾಧ್ಯಕ್ಷರಿಗೆ ರವೀಂದ್ರ ಸೂಚಕ, ಭಾಗ್ಯಮ್ಮ ಗೋವಿಂದಪ್ಪ ಅನುಮೋದಕರಾಗಿದ್ದರು.
ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಸೋಮಶೇಖರ್ ಆಗಮಿಸಿ ಚುನಾವಣೆ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ 12ಕ್ಕೆ 12 ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಲಾಗಿತ್ತು.
ಕೆ.ದ್ಯಾಮೇಗೌಡ ನೇತೃತ್ವದ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ 8 ಮಂದಿ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಬೆಂಬಲಿತ 4 ನಿರ್ದೇಶಕರು ಆಯ್ಕೆಯಾಗಿದ್ದರು.
ಆದರೆ ಹೊಸ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕ ಪಾಲವ್ವನಹಳ್ಳಿ ಚಿದಾನಂದ್ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಲು ಮುಂದಾಗಿದ್ದರು ಆದರೆ ಅವರಿಗೆ ಸೂಚಕರು ಮತ್ತು ಅನುಮೋದಕರು ಲಭ್ಯವಿಲ್ಲದೆ ಅರ್ಜಿ ಹಾಕಲಿಲ್ಲ.
ಇತರೆ ಮೂರು ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಬಾಷಾ ಸಾಬ್, ರವೀಂದ್ರಪ್ಪ, ರಾಜಣ್ಣ ಇವರು ಕೊನೆ ಕ್ಷಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಬೆಂಬಲಿಸಿದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು.
ಅವಿರೋಧ ಆಯ್ಕೆಯಾಗಿದ್ದ ನಿರ್ದೇಶಕರು-
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳಾದ ಕೋವೇರಹಟ್ಟಿ ಕೆ.ದ್ಯಾಮೇಗೌಡ, ರವಿ ವರ್ಮ, ಪಾಲವ್ವನಹಳ್ಳಿಯ ಬಿ.ಆರ್.ರಾಮಚಂದ್ರಪ್ಪ, ದಿನೇಶ್, ಮಂಜಕ್ಕ, ಲತಾ, ಭಾಗ್ಯಮ್ಮ ಗೋವಿಂದಪ್ಪ ಹಾಗೂ ಕಾರೋಬನಹಳ್ಳಿ ರತ್ನಮ್ಮ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
“ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಡಿ.ಸುಧಾಕರ್ ನೇತೃತ್ವದ ಕಾಂಗ್ರೆಸ್ ಪಕ್ಷದ ಬೆಂಬಲಿತ ಮೂರು ನಿರ್ದೇಶಕರಾದ ಪಾಲವ್ವನಹಳ್ಳಿಯ ರವೀಂದ್ರಪ್ಪ, ಬಾಷಾಸಾಬ್, ರಾಜಣ್ಣ ಇವರುಗಳು ಜೆಡಿಎಸ್-ಬಿಜೆಪಿ ಮೈತ್ರಿ ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಚಿದಾನಂದ ಏಕಾಂಗಿಯಾಗಿದ್ದು ಅವರಿಗೆ ಸೂಚಕ ಮತ್ತು ಅನುಮೋದಕರೇ ಲಭ್ಯವಾಗಲಿಲ್ಲ. ಹಾಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಎರಡು ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ”.
ಕೆ.ದ್ಯಾಮೇಗೌಡ, ಮಾಜಿ ಉಪಾಧ್ಯಕ್ಷರು, ಜಿಪಂ, ಚಿತ್ರದುರ್ಗ.

