ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇವರೆಂತಹ ಸ್ವಾಮಿಗಳು, ಪರಿವರ್ತನೆಯ ಅಗತ್ಯವಿದೆ…….
ಹಿಂದೂ ಧರ್ಮದ ಅಥವಾ ಮತದ ಅಥವಾ ಜೀವನ ವಿಧಾನದ ಅಥವಾ ಭಾರತೀಯ ಧಾರ್ಮಿಕ – ಆಧ್ಯಾತ್ಮಿಕ ಜೀವನದ , ಸ್ವಾಮೀಜಿ – ಮಹರ್ಷಿ – ಗುರೂಜಿ – ಮಠಾಧಿಪತಿ – ಪೀಠಾಧಿಪತಿ – ಧರ್ಮಾಧಿಕಾರಿ ಎಂಬ ಪರಿಕಲ್ಪನೆಯನ್ನು ಬದಲಾಯಿಸೋಣವೇ ? ಅಥವಾ ಆ ರೀತಿಯ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪುನರ್ ರೂಪಿಸೋಣವೇ ?
ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ಕಾವಿಧಾರಿ ಸ್ವಾಮಿಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ತುಂಬಾ ಗಾಬರಿ ಮೂಡಿಸಿದೆ………
ಕೆಲವೊಮ್ಮೆ ಅತಿಯಾದ ಕುಡುಕರು, ಅರೆ ಹುಚ್ಚರು, ತೀರಾ ಅಂಧಾಭಿಮಾನಿಗಳು, ಉಡಾಫೆ ವ್ಯಕ್ತಿತ್ವದವರು, ಭಟ್ಟಂಗಿಗಳು ಮಾತನಾಡುವುದನ್ನು ಕೇಳಿದ್ದೇವೆ. ಅವರು ಹಿಂದೆ ಮುಂದೆ ನೋಡದೆ ಬಾಯಿಗೆ ಬಂದಂತೆ ಯಾರನ್ನೋ ಇಂದ್ರ ಚಂದ್ರ ಎನ್ನುತ್ತಾರೆ ಇಲ್ಲವೇ ಕೆಟ್ಟ ಕೊಳಕು ಮಾತುಗಳಲ್ಲಿ ನಿಂದಿಸುತ್ತಾರೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರನ್ನು ಸಹಜ ಮನಸ್ಥಿತಿಯ ಆರೋಗ್ಯವಂತ ವ್ಯಕ್ತಿಗಳು ಎಂದು ಸಮಾಜ ಪರಿಗಣಿಸುವುದಿಲ್ಲ.
ಇದಕ್ಕೆ ವಿರುದ್ಧವಾಗಿ ಸ್ವಾಮೀಜಿಗಳು ಎಂದು ಕರೆಯಲ್ಪಡುವ ವ್ಯಕ್ತಿಗಳ ಮಾತುಗಳನ್ನು ನಮ್ಮ ಸಮಾಜ ಅತ್ಯಂತ ಗೌರವಯುತವಾಗಿ ಆಲಿಸುತ್ತದೆ ಮತ್ತು ಬೆಲೆ ಕೊಡುತ್ತದೆ. ಏಕೆಂದರೆ ಸ್ವಾಮೀಜಿ ಸರ್ವ ಸಂಗ ಪರಿತ್ಯಾಗಿ, ದೈವಾಂಶ ಸಂಭೂತ, ತಾಳ್ಮೆ ವಿವೇಚನೆ ಹೊಂದಿರುವವರು, ಅಪಾರ ಜ್ಞಾನ ಉಳ್ಳವರು, ನಿಷ್ಕಲ್ಮಶ ಮತ್ತು ನಿಷ್ಪಕ್ಷಪಾತ ಮನೋಭಾವದವರು ಎಂಬ ಖಚಿತ ಅಭಿಪ್ರಾಯ ಹೊಂದಿದ್ದಾರೆ.
ಮೌಢ್ಯವೋ, ಮೂರ್ಖತನವೋ, ಮುಗ್ದತೆಯೋ, ಸಂಸ್ಕಾರವೋ, ಸಂಪ್ರದಾಯವೋ, ಭಕ್ತಿಯೋ, ಒಟ್ಟಿನಲ್ಲಿ ಈ ಕ್ಷಣದಲ್ಲಿಯೂ ಸ್ವಾಮೀಜಿಗಳ ಬಗ್ಗೆ ಬಹಳ ಜನರಲ್ಲಿ ಸದಾಭಿಪ್ರಾಯವಿದೆ.
ಆದರೆ ಇತ್ತೀಚಿನ ಟಿವಿ ಮಾಧ್ಯಮಗಳಲ್ಲಿ ಕೆಲವು ಸ್ವಾಮೀಜಿಗಳ ಹೇಳಿಕೆ ಮತ್ತು ಹೋರಾಟಗಳನ್ನು ಗಮನಿಸಿದಾಗ ಆ ಪರಿಕಲ್ಪನೆ ಈಗಲೂ ಉಳಿದಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಮೊದಲು ಸನ್ಯಾಸಿ ಸ್ವಾಮಿಗಳಿಗೆ ಜಾತಿ ಬಂತು, ನಂತರ ಪಕ್ಷ ಬಂತು, ತದನಂತರ ಪಕ್ಷದ ಅವರ ಜಾತಿಯ ನಾಯಕ ಬಂದ, ಮುಂದೆ ಹಣ ಬಂತು, ಆಮೇಲೆ…
ಸಂಸ್ಕಾರ ಹೋಯಿತು, ಸಭ್ಯತೆ ಹೋಯಿತು, ಮಾತಿನ ಮೇಲೆ ಹಿಡಿತ ಹೋಯಿತು, ಮನುಷ್ಯತ್ವ ಹೋಯಿತು, ಕೊನೆಗೆ ವ್ಯಕ್ತಿತ್ವವೇ ನಾಶವಾಯಿತು…..
ಈಗ ನಾವು ಹೇಗೆ ಇವರನ್ನು ಸ್ವಾಮೀಜಿಗಳು ಎಂದು ಕರೆಯುವುದು ? ಕೆಲವೇ ಕೆಲವು ಅನ್ನ ದಾಸೋಹ, ಅಕ್ಷರ ದಾಸೋಹದ, ಕಾಯಕವೇ ಕೈಲಾಸ ಎಂದು ನಂಬಿರುವ ಸ್ವಾಮಿಗಳು ಇದ್ದಾರೆ ನಿಜ. ಅವರನ್ನು ಹೊರತುಪಡಿಸಿ ನೋಡಿದರೆ…..
ಈ ಮಾಧ್ಯಮಗಳ ಪ್ರಚಾರವೇ ಸಮಾಜದ ಅಭಿಪ್ರಾಯ ರೂಪಿಸುವುದರಿಂದ ಕಳ್ಳ ಸ್ವಾಮಿಗಳ ಬಗ್ಗೆ ನಾವು ಹೆಚ್ಚು ಮಾತನಾಡಬೇಕಾಗಿದೆ.
ಲೈಂಗಿಕ ಹಗರಣ, ಆಸ್ತಿಗಾಗಿ ವಂಚನೆ ಮುಂತಾದ ಕ್ರಿಮಿನಲ್ ಸ್ವಾಮಿಗಳ ವಿಷಯ ಹೊರತುಪಡಿಸಿದರೂ ಈ ಸ್ವಾಮೀಜಿ ಮುಖವಾಡದ ರಾಜಕಾರಣಿಯಂತವರು
” ಸ್ವಾಮಿಗಳು ” ಎಂಬ ಪರಿಕಲ್ಪನೆಗೆ ಕಳಂಕವಾಗಿದ್ದಾರೆ. ಇದನ್ನು ಸರಿಪಡಿಸಲೇಬೇಕಿದೆ. ಇಲ್ಲದಿದ್ದರೆ ನಮ್ಮ ಸಮಾಜದ ಆಧೋಗತಿ ಇನ್ನಷ್ಟು ತೀವ್ರವಾಗುತ್ತದೆ. ಸಾಮಾನ್ಯ ವ್ಯವಸ್ಥೆ ಇವರಿಂದಾಗಿ ಕುಸಿಯುತ್ತದೆ.
ಬೇರೆ ಧರ್ಮದ ಈ ರೀತಿಯ ಧಾರ್ಮಿಕ ವ್ಯಕ್ತಿಗಳ ಕಪಟತನದ ಬಗ್ಗೆ ಮಾತನಾಡಿ ನಾವು ಸಮಾಧಾನ ಮಾಡಿಕೊಳ್ಳುವುದು ಬೇಡ. ಅದನ್ನು ಸಹ ಖಂಡಿಸೋಣ. ಆದರೆ ಮುಖ್ಯವಾಗಿ ನಮ್ಮ ಸಮಾಜದ ಈ ಗೋಮುಖ ವ್ಯಾಘ್ರಗಳನ್ನು ಗುರುತಿಸಿ ಸ್ವಾಮೀಜಿ ಪರಿಕಲ್ಪನೆಯನ್ನು ಪರಿಷ್ಕರಿಸಬೇಕಿದೆ.
ಲೇಖನ:ವಿವೇಕಾನಂದ. ಎಚ್. ಕೆ. 9663750451.

