ನ.07 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ತಾಲ್ಲೂಕು ಸಾಣೆಹಳ್ಳಿಯ ಶ್ರೀ ತರಳುಬಾಳು ಜಗದ್ಗುರು ಬೃಹನ್ಮಠದಲ್ಲಿ, ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಮತ್ತು ರಾಷ್ಟ್ರೀಯ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನ.07 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಚ್ಚುಕಟ್ಟಾಗಿ ಶಿಷ್ಟಾಚಾರ ಪಾಲನೆಯೊಂದಿಗೆ ಕಾನೂನು ಸುವ್ಯವಸ್ಥೆ, ಸಾರಿಗೆ ಮತ್ತು ರಕ್ಷಣೆ ವ್ಯವಸ್ಥೆಗಳನ್ನು ಏರ್ಪಾಡು ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಪ್ರವಾಸದ ವೇಳೆ ತಮ್ಮ ತಮ್ಮ ಇಲಾಖೆಗಳ ಪ್ರಗತಿಯ ಸಂಪೂರ್ಣ ಮಾಹಿತಿಯೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು. ಮುಖ್ಯವಾಗಿ ಪಂಚಗ್ಯಾರಂಟಿ ಯೋಜನೆಗಳ ಈವರೆಗಿನ ಪ್ರಗತಿಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಬೇಕು. ಸ್ಥಳೀಯ ತಹಶೀಲ್ದಾರ್ ಹಾಗೂ ಪೊಲೀಸರು ಬಂದೋಬಸ್ತ್ ಸಿದ್ದತೆಗಳನ್ನು ಪರಿಶೀಲಿಸಬೇಕು. ಉಪವಿಭಾಗಾಧಿಕಾರಿಗಳು ಶಿಷ್ಟಾಚಾರ ಪ್ರಕಾರ ಮುಖ್ಯಮಂತ್ರಿಗಳು ಸೇವಿಸುವ ಆಹಾರದ ಪರೀಕ್ಷೆಗೆ ಆಹಾರ ಸುರಕ್ಷತಾಧಿಕಾರಿಗಳನ್ನು ನೇಮಿಸಬೇಕು. ತುಮಕೂರಿನಿಂದ ಹೆಲಿಕಾಪ್ಟರ್ ಮೂಲಕ ಹೊಸದುರ್ಗ ನೀರಗುಂದ ಗೇಟ್ ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‍ಗೆ ಮುಖ್ಯಮಂತ್ರಿಗಳು ಆಗಮಿಸುವರು. ನಂತರ ಸಾಣೆಹಳ್ಳಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಎರಡೂ ಸ್ಥಳದಲ್ಲಿಯೂ ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್, ಅಗ್ನಿಶಾಮಕ ಇಲಾಖೆಯಿಂದ ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿರಿಸಬೇಕು. ಮುಖ್ಯಮಂತ್ರಿಗಳು ಕಾರಿನಲ್ಲಿ ಪ್ರಯಾಣಿಸುವ ರಸ್ತೆಗಳ ಸುಸ್ಥಿತಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳಬೇಕು. ಕಾರ್ಯಕ್ರಮಗಳಲ್ಲಿ ವಿದ್ಯುತ್ ಅಡಚಣೆಯಾಗದಂತೆ ಬೆಸ್ಕಾಂ ಅಧಿಕಾರಿಗಳು ಎಚ್ಚರವಹಿಸಬೇಕು. ರಾತ್ರಿ ಮುಖ್ಯಮಂತ್ರಿಗಳು ರಸ್ತೆಯ ಮೂಲಕ ಬೆಂಗಳೂರಿಗೆ ತೆರಳುವುದರಿಂದ ಪೊಲೀಸ್ ಇಲಾಖೆ ಮುಂಚಿತವಾಗಿಯೇ ಸಾರಿಗೆ ಹಾಗೂ ರಕ್ಷಣೆ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಬೆಲಗೂರು ಹಾಗೂ ಸಾಣೆಹಳ್ಳಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಅಗತ್ಯ ಸ್ವಚ್ಛತಾ ಕಾರ್ಯಗಳನ್ನು ಮುಂಚಿತವಾಗಿ ಕೈಗೊಳ್ಳಬೇಕು. ರೈತರು, ಹೋರಾಟಗಾರರು ಹಾಗೂ ಸಾರ್ವಜನಿಕರು ಮುಖ್ಯಮಂತ್ರಿಗಳಲ್ಲಿ ಕುಂದು ಕೊರತೆ, ಅಹವಾಲುಗಳನ್ನು ಲಿಖತವಾಗಿ ಸಲ್ಲಿಸಿದರೆ ಅಥವಾ ಮೌಖಿಕವಾಗಿ ಹೇಳಿಕೊಂಡರೆ, ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಉತ್ತರ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಡಿವೈಎಸ್‍ಪಿ ದಿನಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನ.07 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

