ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹರಿಯಾಣ ವಿಧಾನಸಭಾ ಚುನಾವಣಾ ಮತಪಟ್ಟಿಯಲ್ಲಿ 25 ಲಕ್ಷ ಮತದಾರರ ನಮೂದುಗಳು ನಕಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಈ ಮತ ಕಳವು ಆಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗ ಮತ್ತು ದೇಶದಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿರುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದು, ಶೇ 100ರಷ್ಟು ಪುರಾವೆಗಳೊಂದಿಗೆ ತಾವು ಈ ಆರೋಪ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.ಹರಿಯಾಣದಲ್ಲಿ ಬಿಜೆಪಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇಬ್ಬರು ಚುನಾವಣಾ ಆಯುಕ್ತರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಅವರು ಪಾಲುದಾರಿಕೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಲು ‘ಆಪರೇಷನ್ ಸರ್ಕಾರ್ ಚೋರಿ‘ ಪ್ರಾರಂಭಿಸಲಾಗಿತ್ತು ಎಂದು ಕಾಂಗ್ರೆಸ ನಾಯಕ ಗಂಭೀರ ಆರೋಪ ಮಾಡಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಭಾರತದ ಜನರಿಗೆ “ಸುಳ್ಳು” ಹೇಳುತ್ತಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
25,41,144 ಜನರು ನಕಲಿ ಮತದಾರರು: ಇಂದಿರಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗಾಂಧಿ, ಹರಿಯಾಣದ ಚುನಾವಣಾ ಪಟ್ಟಿಯನ್ನು ಉಲ್ಲೇಖಿಸಿ, 25,41,144 ಜನರು ನಕಲಿ ಮತದಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ನಕಲಿ ಮತದಾರರನ್ನು ಏಕೆ ತೆಗೆದುಹಾಕುತ್ತಿಲ್ಲ? ಏಕೆಂದರೆ ಹಾಗೆ ಮಾಡಿದರೆ, ನ್ಯಾಯಯುತ ಚುನಾವಣೆಗಳಿಗೆ ಕಾರಣವಾಗುತ್ತದೆ ಮತ್ತು ಆಯೋಗ ನ್ಯಾಯಯುತ ಚುನಾವಣೆಗಳನ್ನು ಬಯಸುವುದಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಎಲ್ಲಾ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು. ಐದು ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಭರ್ಜರಿ ಜಯ ಸಾಧಿಸುತ್ತಿದೆ ಎಂದು ಭವಿಷ್ಯ ನುಡಿದಿದ್ದವು.
ಆಶ್ಚರ್ಯಕರವಾದ ಇನ್ನೊಂದು ವಿಷಯ ಎಂದರೆ ಹರಿಯಾಣದಲ್ಲಿ ಮೊದಲ ಬಾರಿಗೆ ಅಂಚೆ ಮತಗಳು ಫಲಿತಾಂಶಕ್ಕಿಂತ ಭಿನ್ನವಾಗಿವೆ. ಅಂಚೆ ಮತಪತ್ರಗಳಲ್ಲಿ, ಕಾಂಗ್ರೆಸ್ 73 ಸ್ಥಾನಗಳನ್ನು ಪಡೆದರೆ, ಬಿಜೆಪಿ 17 ಸ್ಥಾನಗಳನ್ನು ಪಡೆದುಕೊಂಡಿತ್ತು ಎಂದು ಅವರು ಹೇಳಿದ್ದಾರೆ.

