ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕೇಂದ್ರ ಸರ್ಕಾರದ ಆರ್ಎಎಂಪಿ ಯೋಜನೆಯಡಿ ಸರ್ಕಾರಿ ಅಧಿಕಾರಿಗಳಿಗೆ ಒಂದು ದಿನದ ಕೈಗಾರಿಕೆ ಯೋಜನೆಗಳ ತಿಳುವಳಿಕೆ ಕಾರ್ಯಕ್ರಮ ನಡೆಯಿತು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು ಟೆಕ್ಸಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಉದ್ಘಾಟಿಸಿ ಮಾತನಾಡಿ, ಕೈಗಾರಿಕೆ ಮಾರ್ಗಸೂಚಿ, ಕೈಗಾರಿಕಾ ನೀತಿ, ದೃಷ್ಟಿಕೋನ, ದ್ವೇಯ, ಉದ್ದೇಶಗಳು, ಕಾರ್ಯತಂತ್ರಗಳು, ಕೈಗಾರಿಕಾ ನೀತಿಯಲ್ಲಿರುವ ಸೌಲಭ್ಯಗಳು, ಸೌಲಭ್ಯ ಪಡೆಯುವ ಅವಧಿ ಮತ್ತು ಅನ್ವಯಗಳ ಬಗ್ಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ತಿಳಿಸಿ ಉಳಿದೆಲ್ಲಾ ಎಲ್ಲಾ ಇಲಾಖೆಯಲ್ಲಿಯೂ ಸಹ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಮಾತನಾಡಿ, ಜಿಲ್ಲೆಯೂ ಹಿಂದೂಳಿದ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಹಾಗೂ ಅದಕ್ಕೆ ಸರ್ಕಾರ ನೀಡುವ ಸೌಲತ್ತುಗಳ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರ ಪ್ರತಿ ಐದು ವರ್ಷಗಳಿಗೊಮ್ಮೆ ಹೊರಡಿಸುವ “ಕೈಗಾರಿಕಾ ನೀತಿ‘ ಹೊತ್ತಿಗೆಯನ್ನು ಕೈಗಾರಿಕಾ ಇಲಾಖೆಯಿಂದ ಪಡೆದು ಸಾರ್ವಜನಿಕರಿಗೆ ಕೈಗಾರಿಕೆಗಳ ಸ್ಥಾಪನೆ ಹಾಗೂ ಸರ್ಕಾರದಿಂದ ಸೌಲಭ್ಯಗಳ ಬಗ್ಗೆ, ತಿಳಿ ಹೇಳಿ ಜಿಲ್ಲೆಯಲ್ಲಿ ಕೈಗಾರಿಕೆ ಘಟಕಗಳನ್ನು ಸ್ಥಾಪಿಸಲು ನೆರವಾಗಿ ಜಿಲ್ಲೆಯನ್ನು ಸಿರಿವಂತಗೊಳಿಸಬೇಕೆಂದು ಭಾಗವಹಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ ಕಛೇರಿಯ ಉಪ ನಿರ್ದೇಶಕರಾದ ಬಿ.ಕೆ.ಮಂಜುನಾಥಸ್ವಾಮಿ ಮಾತನಾಡಿ, ಕೈಗಾರಿಕಾ ನೀತಿಯನ್ವಯ ಕರ್ನಾಟಕವು ರಾಜ್ಯದ ಒಟ್ಟು ಉತ್ಪನ್ನ (ಜಿಡಿಪಿ) ಕೈಗಾರಿಕೆ ಬೆಳವಣಿಗೆ, ಹೂಡಿಕೆ, ಹರಿವು ಮೊದಲಾದ ಆರ್ಥಿಕ ಆಧಾರತಂತ್ರಗಳು ಸ್ಥಿರವಾಗಿದ್ದು, ಬೆಳವಣಿಗೆ ಗತಿಯಲ್ಲಿದೆ, ಇದೀಗ ವೇಗ ವರ್ಧಿಸುವ ಸಮಯವಾಗಿದ್ದು, ಅಮೂಲಾಗ್ರ ಬದಲಾವಣೆ ತಂತ್ರ, ಕುಶಲತೆಯ ಸುಧಾರಣೆಯ ಮೂಲಕ ಕರ್ನಾಟಕವನ್ನು ಗ್ಲೋಬಲ್ ವ್ಯಾಲ್ಯೂ ಚೈನ್ ಮ್ಯಾಪ್ ನಲ್ಲಿ ಗುರುತಿಸಿರುವ ಹಾಗೆ, ಸೈಟ್ ವ್ಯಾಲ್ಯೂ ಚೈನ್ ಮ್ಯಾಪ್ನಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಸಹ ಗುರುತಿಸುವಂತಾಗಬೇಕು ಎಂದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಸಹಾಯಧನ, ಉತ್ತೇಜನ ಮತ್ತು ರಿಯಾಯತಿ, ಪ್ಯಾಕೇಜ್ಗಳು, ಅರ್ಹವಾದ ಸೇವಾ ಉದ್ಯಮಗಳ ಪಟ್ಟಿ, ಉತ್ತೇಜನ ಮತ್ತು ರಿಯಾಯತಿಗಳಿಗೆ ಅರ್ಹವಲ್ಲದ ಕೈಗಾರಿಕೆ ಚಟುವಟಿಕೆಗಳು, ಬಂಡವಾಳ ಹೂಡಿಕೆ, ಉದ್ಯೋಗ, ಭೂಮಿ, ಕೈಗಾರಿಕೆ ಸ್ಥಾಪನೆಗೆ ವಿದ್ಯುತ್ ಮತ್ತು ನೀರಿನ ಅವಶ್ಯಕತೆಗಳು,
ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳ ಪಟ್ಟಿ (ಎಂಎಸ್ಎಂಇ), ಕೇಂದ್ರ ಸರ್ಕಾರದ ಸುಲಲಿತ ವಹಿವಾಟು ಯೋಜನ ಹಾಗೂ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದಿಂದ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಸುದೀರ್ಘವಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ವಿವರಿಸಿದರು.

