ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಪರಿಹರಿಸಬೇಕಾದ ಸಮಸ್ಯೆಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ? ರೈತರು ಕೇಂದ್ರದ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪ್ರತಿಭಟನಾ ನಿರತ ರಾಜ್ಯದ ಕಬ್ಬು ಬೆಳೆಗಾರ ಸಂಘಟನೆಗಳ ಮುಖಂಡರುಗಳ ಜೊತೆ ಶುಕ್ರವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಸಕ್ಕರೆಗೆ ಎಂಎಸ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್ಆರ್‌ಪಿ ನಿಗದಿಪಡಿಸುವವರು ಕೂಡ ಅವರೇ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರವೇ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ ಎಂದು ನೀವೇ ಹೇಳುತ್ತಿದ್ದೀರಿ, ಅವರಿಂದ ಆಗಿರುವ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೇಳಿದರೆ ಹೇಗೆ?
ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್‌ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ನೀವೆಲ್ಲಾ ಮನವಿ ಮಾಡಿದ್ದೀರಿ. ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
ಕಬ್ಬಿನ 11.25 ರಿಕವರಿಗೆ ರೂ.3,250 ಅನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರದಿಂದ ರೂ.50 ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ.
ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು ಎಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಇದರ ಮರು ಪರಿಶೀಲನೆ ನಡೆಸಲಾಗುವುದು.
ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು, ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

