ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನ ಮುಖಭಂಗ ಗ್ಯಾರೆಂಟಿ ಆಗುತ್ತಿದ್ದಂತೆ ರಾಹುಲ್ ಗಾಂಧಿ ಅವರು ಬಲವಂತವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಅವರ ಕೈಯಲ್ಲಿ ಸುದ್ದಿಗೋಷ್ಠಿ ಮಾಡಿಸಿ “ವೋಟ್ ಚೋರಿ” ಮೆಗಾ ಧಾರಾವಾಹಿಯ ಮತ್ತೊಂದು ಸಂಚಿಕೆ ಬಿಡುಗಡೆ ಮಾಡಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಆಟಂ ಬಾಂಬ್, ಹೈಡ್ರೋಜನ್ ಬಾಂಬ್ ಎಂದು ಪದೇ ಪದೇ ಹೇಳಿದ ಸುಳ್ಳನ್ನೇ ಹೇಳಿ ಜನರ ಮುಂದೆ ಈಗಾಗಲೇ ನಗೆಪಾಟಲಿಗೀಡಾಗಿರುವ ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವ ಮನಸ್ಸಿಲ್ಲದಿದ್ದರೂ ಕುರ್ಚಿ ಉಳಿಸಿಕೊಳಲು, ಕುರ್ಚಿ ಗಿಟ್ಟಿಸಿಕೊಳ್ಳಲು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಒಲ್ಲದ ಮನಸ್ಸಿನಿಂದ ನಾಮಕಾವಸ್ತೆ ಸುದ್ದಿ ಗೋಷ್ಠಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಆರೋಪದಲ್ಲಿ ಹುರುಳಿದ್ದರೆ ಚುನಾವಣಾ ಆಯೋಗ ಕೇಳಿದಂತೆ ಅಫಿಡವಿಟ್ ಯಾಕೆ ಸಲ್ಲಿಸುತ್ತಿಲ್ಲ ನ್ಯಾಯಾಲಯದಲ್ಲಿ ಯಾಕೆ ಮೊಕದ್ದಮೆ ದಾಖಲಿಸುತ್ತಿಲ್ಲ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರು ಮಾಡಿದ ಪ್ರತಿಯೊಂದು ಆರೋಪಕ್ಕೂ ಚುನಾವಣಾ ಆಯೋಗ ಸೂಕ್ತ ಪ್ರತ್ಯುತ್ತರ ನೀಡಿದೆ. ಮಾಧ್ಯಮಗಳು ರಾಹುಲ್ ಗಾಂಧಿ ಅವರು ಹೇಳಿದ್ದೆಲ್ಲಾ ಹಸಿ ಸುಳ್ಳು, ಕಟ್ಟು ಕಥೆ ಅಂತ ಸಾಬೀತು ಮಾಡಿವೆ. ಇಷ್ಟಾದರೂ ಪದೇ ಪದೇ ಅದೇ ಸುಳ್ಳನ್ನು ಹೇಳುತ್ತಿರುವ ರಾಹುಲ್ ಗಾಂಧಿ ಅವರ ಭಂಡತನವನ್ನ ನಿಜಕ್ಕೂ ಮೆಚ್ಚಲೇಬೇಕು.
ಇಷ್ಟಕ್ಕೂ ನಿಜವಾದ ಮತಗಳ್ಳತನ ಮಾಡುತ್ತಿರುವವರು ಕಾಂಗ್ರೆಸ್ ಪಕ್ಷದವರು. ಕರ್ನಾಟಕದಲ್ಲಿರುವ ಲಕ್ಷಾಂತರ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡದೇ ರಕ್ಷಣೆ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರದ ಜಾಣ ಕುರುಡುತನದ ಹಿಂದಿರುವ ನಿಜವಾದ ಉದ್ದೇಶವೇ ಅಕ್ರಮ ಬಾಂಗ್ಲಾ ವಲಸಿಗರ ಕೈಯಲ್ಲಿ ಅಕ್ರಮ ಮತದಾನ ಮಾಡಿಸಿ ಆ ಮೂಲಕ ಚುನಾವಣೆ ಗೆಲ್ಲುವುದು.
ಕಾಂಗ್ರೆಸ್ ಪಕ್ಷಕ್ಕೆ ಮತಗಳ್ಳತನದ ಬಗ್ಗೆ ನಿಜವಾದ ಬದ್ಧತೆ ಇದ್ದರೆ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕೂಡಲೇ ಕ್ರಮ ಕೈಗೊಂಡು ಗಡೀಪಾರು ಮಾಡಲಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

