ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಮತಚೋರಿ ಹೆಸರಿನಲ್ಲಿ ಕಾಂಗ್ರೆಸ್ ಸಹಿ ಚೋರಿ ನಡೆಸಿದೆ”ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
‘ಕುಣಿಯಲಾರದವನಿಗೆ ನೆಲ ಡೊಂಕು‘ ಎಂಬಂತೆ ಚುನಾವಣೆಗಳನ್ನು ಜಯಿಸಲಾಗದ ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಮತಕಳವು ಹೆಸರಿನಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸಿ ವ್ಯರ್ಥ ಪ್ರಲಾಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರನ್ನು ತೃಪ್ತಿಗೊಳಿಸಲು ಬಣ ಬಡಿದಾಟದಲ್ಲಿ ಮುಳುಗಿ ಹೋಗಿರುವ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಪೈಪೋಟಿಗೆ ಬಿದ್ದು ಮತ ಕಳವಿನ ಆರೋಪವನ್ನು ಬೆಂಬಲಿಸಿ,
1 ಕೋಟಿಗೂ ಹೆಚ್ಚು ಸಾರ್ವಜನಿಕರ ಸಹಿ ಸಂಗ್ರಹಿಸಿದ್ದೇವೆಂದು ಖೊಟ್ಟಿ ದಾಖಲೆಗಳ ಸಂಗ್ರಹದ ಪ್ರಹಸನ ನಡೆಸಿದ್ದಾರೆ, ಸಾರ್ವಜನಿಕರ ಹೆಸರಿನಲ್ಲಿ ನಕಲಿ ಸಹಿಗಳನ್ನು ಸೃಷ್ಟಿಸಿಕೊಂಡು ದೆಹಲಿಗೆ ಹೊತ್ತಯ್ಯಲು ಸಿದ್ದರಾಗಿದ್ದಾರೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಈ ಸಹಿ ಸಂಗ್ರಹವನ್ನು ಯಾರಿಗೆ ತಲುಪಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಚುನಾವಣಾ ಆಯೋಗಕ್ಕೆ ಸಲ್ಲಿಸಿದರೆ ಈ ಸಹಿ ಸಂಗ್ರಹದ ಅಸಲಿತನ ಪರೀಕ್ಷಿಸಿ ಕೊಳ್ಳಲಿ ಎಂದು ಮನವಿ ಮಾಡುವೆ.
ಸಹಿ ಸಂಗ್ರಹದಲ್ಲಿ ದೇಶದಲ್ಲಿ ನಾವೇ ಮೊದಲು ಎಂದು ಕಾಂಗ್ರೆಸ್ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್‘ಗೆ ಅಳಿದುಳಿದಿರುವುದು ‘ಒಂದು ಮತ್ತೊಂದು’ ಅದರಲ್ಲಿ ಕರ್ನಾಟಕ ರಾಜ್ಯವೂ ಒಂದು ವಸ್ತುಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಲ್ಲದೇ ಇನ್ನೆಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ನೀವು ಕೂಗು ಹಾಕಲು ಸಾಧ್ಯ? ಅವರು ಟೀಕಿಸಿದ್ದಾರೆ.
ರಾಜ್ಯದಲ್ಲಿ 138 ಸ್ಥಾನದಲ್ಲಿ ಗೆಲುವು ಸಾಧಿಸಿದ್ದೀರಿ, 9 ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದೀರಿ, 1 ಕೋಟಿ ಸಹಿ ಸಂಗ್ರಹಿಸಿರುವುದು ನಿಜವೇ ಆದರೆ ನೀವು ಮತಚೋರಿ ನಡೆಸಿಯೇ ಗೆಲುವು ದಾಖಲಿಸಿರುವುದು ಎಂಬುದನ್ನು ನೀವೇ ಪ್ರಮಾಣಿಸಿಕೊಂಡಂತಾಗಲಿಲ್ಲವೇ? ಎಂದು ವಿಜಯೇಂದ್ರ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನೀವು ಹೊತ್ತೊಯ್ಯುತ್ತಿರುವ ಸಹಿ ಸಂಗ್ರಹದ ಗಂಟು ಮುಖ್ಯಮಂತ್ರಿ ಕುರ್ಚಿಯ ತೂಕ ಅಳೆಯುವ ಉದ್ದೇಶವನ್ನು ಸಂಕೇತಿಸುತ್ತಿದೆಯೇ ಹೊರತು, ರಾಹುಲ್ ಗಾಂಧಿಯವರ ಮತಕಳವು ಆರೋಪದ ತೂಕ ಹೆಚ್ಚಿಸುವದಕ್ಕಂತೂ ಬಳಕೆಯಾಗುವುದಿಲ್ಲ ಎಂಬುದು ನೈಜ ವಾಸ್ತವ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.

