ಅಂಬೇಡ್ಕರ್ ಬ್ಯಾನರ್ ಹರಿದು ಬುದ್ಧನ ಪುತ್ಥಳಿ ಹಾನಿ

News Desk

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಅಂಬೇಡ್ಕರ್ ಬ್ಯಾನರ್ ಹರಿದು ಬುದ್ಧನ ಪುತ್ಥಳಿ ಹಾನಿಗೊಳಿಸಿದ ಚಾಮರಾಜನಗರದ ಜ್ಯೋತಿ ಗೌಡನಪುರದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರು ನಿಜವಾದ ಆರೋಪಿಯನ್ನು ಬಿಟ್ಟು ನಿರಪರಾಧಿಯನ್ನು ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 4ರಂದು ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜನ ಬಂಧನ ಬಗ್ಗೆ ತಿಳಿಸಿದ್ದರು.

- Advertisement - 

ರಾತ್ರಿಯಲ್ಲಿ ಕುಡಿದು ಬರುತ್ತಿದ್ದ ಮಂಜುನಾಥನೇ ಈ ಕೃತ್ಯವೆಸಗಿದ್ದಾನೆಂದು ಪೊಲೀಸರು ಆರೋಪಿಸಿದ್ದರು. ಆ ದಿನ ಅವನೊಡನಿದ್ದ ಸ್ನೇಹಿತ ಶಿವಣ್ಣ ಕೂಡ ಈ ಕೃತ್ಯಕ್ಕೆ ಸಾಥ್ ಕೊಟ್ಟಿದ್ದಾನೆಂದು ಆರೋಪಿಸಲಾಗಿತ್ತು.

ಮಂಜುನಾಥನೇ ಈ ಕೃತ್ಯ ಎಸಗಿದ್ದಾನೆಂದು ಬಲವಂತವಾಗಿ ಆತನ ಸ್ನೇಹಿತ ಶಿವಣ್ಣನಿಂದ ಹೇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆತನ ಸ್ನೇಹಿತ ಈ ಕೆಲಸಕ್ಕೆ ಒಪ್ಪದ ಕಾರಣ ತಪ್ಪೊಪ್ಪಿಸಲು ಥರ್ಡ್ ಡಿಗ್ರಿ ಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

- Advertisement - 

ಮಂಜುನಾಥ್ ಈ ಹಿಂದೆ ಗ್ರಾಮದ ಮಹಿಳೆಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲೂ ವಿವಾದಕ್ಕೊಳಗಾಗಿದ್ದನು. ಆಗ ದಲಿತ ಮುಖಂಡರು ಸೇರಿ ಅವನಿಗೆ 60 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ದಂಡದ ಹಣ ಕಟ್ಟಲು ತನ್ನ ಬೈಕ್ ಅಡವಿಟ್ಟಿದ್ದ ಮಂಜುನಾಥ್, ಇದೇ ಕೋಪಕ್ಕೆ ಅಂಬೇಡ್ಕರ್ ಬ್ಯಾನರ್ ಹರಿದು ಬುದ್ಧನ ಪುತ್ಥಳಿ ಹಾನಿಗೊಳಿಸಿದ್ದಾನೆಂದು ಪೊಲೀಸರು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯ, ಪೊಲೀಸರು ಅಮಾಯಕನನ್ನು ಕೇಸ್‌ನಲ್ಲಿ ಫಿಟ್ ಮಾಡಿದ್ದಾರೆಂದು ಪ್ರತಿಭಟಿಸಿದ್ದು, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

 

 

Share This Article
error: Content is protected !!
";